ಶಿವಮೊಗ್ಗ: ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಆರೋಪ

ಶಿವಮೊಗ್ಗ, ಜು.28: ಕೋವಿಡ್ ಆಸ್ಪತ್ರೆಯಾಗಿರುವ ಜಿಲ್ಲಾ ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಆಸ್ಪತ್ರೆಯಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಜು.27ರಂದು ಅನಾರೋಗ್ಯದ ಕಾರಣ ಕೆ.ಆರ್.ಪುರಂ ರಸ್ತೆಯ ನಿವಾಸಿ 60 ವರ್ಷದ ವ್ಯಕ್ತಿಯೊಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲದ್ರವದ ಪರೀಕ್ಷೆ ಕೊರೋನಗೆ ಪಾಸಿಟಿವ್ ಆದ ಕಾರಣ ಅವರು ಕೋವಿಡ್ ವಿಭಾಗಕ್ಕೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರ ಮೆಗ್ಗಾನ್ ಕೋವಿಡ್ ಆಸ್ಪತ್ರೆಯ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇಲ್ಲಿ ಹಿರಿಯ ವೈದ್ಯರು ಆಗಮಿಸದೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಳುಹಿಸುತ್ತಾರೆ. ಅಲ್ಲದೆ ಇಲ್ಲಿನ ನರ್ಸ್‌ಗಳು ಸಹ ರೋಗಿಗಳ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ. ಸೋಂಕಿತರಿಗೆ ನೀಡಲು ಇಲ್ಲಿ ಆಕ್ಸಿಜನ್ ವ್ಯವಸ್ಥೆಯೂ ಇಲ್ಲ. ಇದರಿಂದ ನಮ್ಮ ಚಿಕ್ಕಪ್ಪಇಲ್ಲಿನ ಸಾವನ್ನಪ್ಪಿದ್ದಾರೆ’’ ಎಂದು ಮೃತರ ಅಣ್ಣನ ಮಗ, ಸ್ಥಳೀಯ ಕಾಂಗ್ರೆಸ್ ಮುಖಂಡ ಸೈಯದ್ ವಾಹಿಬ್ ಅಡ್ಡು ಎಂಬವರು ಆರೋಪಿಸಿದ್ದಾರೆ.
‘‘ಮುಖ್ಯಮಂತ್ಯಿ ತವರು ಜಿಲ್ಲೆಯಲ್ಲೇ ಇಂತಹ ಅವ್ಯವಸ್ಥೆ ಇದೆ. ರೋಗಿಗಳ ಜೀವ ಉಳಿಸಬೇಕಾದವರ ನಿರ್ಲಕ್ಷಕ್ಕೆ ಸೋಂಕಿತರು ಪ್ರಾಣ ಕಳೆದುಕೊಳ್ಳಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪಇತ್ತ ಗಮನ ಹರಿಸಿ, ನಮಗಾದ ಅನ್ಯಾಯ ಬೇರೆಯವರಿಗೆ ಆಗದಂತೆ ತಡೆಯಬೇಕು’’ ಎಂದವರು ಮನವಿ ಮಾಡಿದ್ದಾರೆ.
‘‘ಕೊರೋನ ಸೋಂಕಿನಿಂದ ಮೃತಪಟ್ಟ ಕೆ.ಆರ್.ಪುರಂ ರಸ್ತೆಯ ನಿವಾಸಿ 60 ವರ್ಷದ ವ್ಯಕ್ತಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. ಆದರೆ ಅವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ವೈದ್ಯರು ರೋಗಿಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ ವಹಿಸಿಲ್ಲ. ವೈದ್ಯರ ಮೇಲಿನ ಅರೋಪ ಸತ್ಯಕ್ಕೆ ದೂರವಾದುದ್ದು.
-ಡಾ.ಸಿದ್ದಪ್ಪ, ಸೀಮ್ಸ್ ನಿರ್ದೇಶಕರು.







