ಭಾರತೀಯರ ಭಾವನೆಗೆ ನೋವುಂಟು ಮಾಡುವ ಫೋಟೊ ಟ್ವೀಟ್ ಮಾಡಿದ ಇಸ್ರೇಲ್ ಪ್ರಧಾನಿಯ ಪುತ್ರ
ವ್ಯಾಪಕ ಆಕ್ರೋಶದ ನಂತರ ಕ್ಷಮೆಯಾಚನೆ

ಜೆರುಸಲೆಂ: ತಾನು ಮಾಡಿದ್ದ ಒಂದು ಟ್ವೀಟ್ ‘ನಿಂದನಾತ್ಮಕ'ವಾಗಿದೆ’ ಎಂದು ಹಲವು ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಿರಿಯ ಪುತ್ರ ಯಾಯಿರ್ ಕ್ಷಮೆ ಕೋರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸಕ್ರಿಯರಾಗಿರುವ 29 ವರ್ಷದ ಯಾಯಿರ್ ಅವರು ರವಿವಾರ ಹಿಂದೂ ದೇವತೆಯಾಗಿರುವ ದುರ್ಗಾ ಮಾತೆಯ ಚಿತ್ರ ಪೋಸ್ಟ್ ಮಾಡಿದ್ದರು. ಈ ಚಿತ್ರದಲ್ಲಿ ದುರ್ಗೆಯ ಮುಖದ ಬದಲು ಅವರ ತಂದೆ ನೆತನ್ಯಾಹು ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಾಸಿಕ್ಯೂಟರ್ ಆಗಿರುವ ಲಿಯಾತ್ ಬೆನ್ ಅರಿ ಅವರ ಮುಖವನ್ನು ಎಡಿಟ್ ಮಾಡಿದ್ದರು.
ಇದಕ್ಕೆ ಹಲವರು ಆಕ್ಷೇಪಿಸಿದ ನಂತರ ಟ್ವೀಟ್ ಮಾಡಿದ ಯಾಯಿರ್, “ನಾನು ವಿಡಂಬನಾತ್ಮಕ ಪುಟವೊಂದರಿಂದ ಮೀಮ್ ಒಂದನ್ನು ಟ್ವೀಟ್ ಮಾಡಿ ಇಸ್ರೇಲ್ ನ ರಾಜಕೀಯ ನಾಯಕರನ್ನು ಟೀಕಿಸಿದ್ದೇನೆ. ಆದರೆ ಈ ಮೀಮ್ ನಲ್ಲಿರುವುದು ಹಿಂದೂ ಧರ್ಮದ ದೇವತೆ ಎಂದು ನನಗೆ ತಿಳಿದಿರಲಿಲ್ಲ. ನಮ್ಮ ಭಾರತೀಯ ಸ್ನೇಹಿತರಿಂದ ಇದರ ಬಗ್ಗೆ ತಿಳಿದು ಬಂದ ಕೂಡಲೇ ಅದನ್ನು ಡಿಲೀಟ್ ಮಾಡಿದ್ದೇನೆ. ನಾನು ಕ್ಷಮೆ ಕೋರುತ್ತೇನೆ'' ಎಂದು ಅವರು ಹೇಳಿದ್ದಾರೆ.
ಯಾಯಿರ್ ಪೋಸ್ಟ್ ಮಾಡಿದ್ದ ವಿವಾದಾಸ್ಪದ ಚಿತ್ರದಲ್ಲಿ ದುರ್ಗೆಯ ವಾಹನ ಹುಲಿಯ ಮುಖದ ಜಾಗದಲ್ಲಿ ಇಸ್ರೇಲಿ ಅಟಾರ್ನಿ ಜನರಲ್ ಅವಿಚೈ ಮಂಡೆಲ್ಬಿಟ್ ಅವರ ಮುಖವಿತ್ತು.







