‘ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ’: ಸಾವನ್ನಪ್ಪುವ ಗಂಟೆಗಳ ಮೊದಲು ವಿಡಿಯೋ ಮಾಡಿದ ಕೊರೋನ ಸೋಂಕಿತ
ಉತ್ತರ ಪ್ರದೇಶದ ಆಸ್ಪತ್ರೆಯ ದುಸ್ಥಿತಿ

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪುವುದಕ್ಕಿಂತ ಕೆಲವೇ ಗಂಟೆಗಳಿಗೆ ಮುನ್ನ ಕೋವಿಡ್ ರೋಗಿಯೊಬ್ಬರು ಚಿತ್ರೀಕರಿಸಿದ ವೀಡಿಯೋ ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಕುರಿತಂತೆ ಹಲವು ಪ್ರಶ್ನೆಗಳನ್ನೆತ್ತಿದೆ.
ಝಾನ್ಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ದಾಖಲಾಗಿದ್ದ ರೋಗಿಯೊಬ್ಬರು ಚಿತ್ರೀಕರಿಸಿರುವ ಈ 52 ಸೆಕೆಂಡ್ ಅವಧಿಯ ವೀಡಿಯೋದಲ್ಲಿ ಉಸಿರಾಟದ ಸಮಸ್ಯೆಯೊಂದಿಗೆ ಅವರು ಮಾತನಾಡುತ್ತಿರುವುದು ಹಾಗೂ ಅವರು ಧರಿಸಿದ್ದ ಅಂಗಿ ರಕ್ತದಲ್ಲಿ ತೊಯ್ದಿರುವುದು ಕಾಣಿಸುತ್ತದೆ.
“ಇಲ್ಲಿ ನೀರಿನ ಸೌಕರ್ಯವಿಲ್ಲ. ನನಗೆ ಕಷ್ಟವಾಗುತ್ತಿದೆ. ನನ್ನನ್ನು ಬೇರೊಂದು ಆಸ್ಪತ್ರೆಗೆ ಸೇರಿಸಿ. ಇಲ್ಲಿ ಯಾರೂ ಆರೈಕೆ ಮಾಡುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯವಿದೆ'' ಎಂದು ಆತ ಹೇಳುವುದು ಕೇಳಿಸುತ್ತದೆ. ಆತ ಕ್ಯಾಮರಾವನ್ನು ವಾರ್ಡ್‍ನ ಇತರ ಸ್ಥಳಗಳತ್ತ ತಿರುಗಿಸಿದಾಗ ಇತರ ರೋಗಿಗಳು ಬೆಡ್ ಗಳಲ್ಲಿ ಮಲಗಿರುವುದು ಕಾಣಿಸುತ್ತದೆ.
ಆತ ಈ ವೀಡಿಯೋ ಚಿತ್ರೀಕರಿಸಿದ ಎಷ್ಟು ಹೊತ್ತಿನ ನಂತರ ಮೃತಪಟ್ಟಿದ್ದಾರೆಂಬ ಕುರಿತು ಸ್ಪಷ್ಟತೆಯಿಲ್ಲ. “ಆತನ ಪತ್ನಿ ಹಾಗೂ ಪುತ್ರಿ ಕೂಡ ಕೋವಿಡ್-19 ಪಾಸಿಟಿವ್ ಆಗಿದ್ದು ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಅವರಲ್ಲಿ ಯಾವುದೇ ಕೋವಿಡ್ ಲಕ್ಷಣಗಳಿಲ್ಲ'' ಎಂದು ಝಾನ್ಸಿಯ ಮುಖ್ಯ ವೈದ್ಯಾಧಿಕಾರಿ ಡಾ ಜಿ ಕೆ ನಿಗಮ್ ಹೇಳಿದ್ದಾರೆ. ಆದರೆ ವೀಡಿಯೋದಲ್ಲಿ ರೋಗಿ ಮಾಡಿರುವ ಆರೋಪಗಳ ಕುರಿತಂತೆ ಆವರು ಪ್ರತಿಕ್ರಿಯಿಸಿಲ್ಲ.







