ಹಿಂದುಳಿದ ವರ್ಗಗಳ ಕಾನೂನು ಪದೀಧರರಿಗೆ ವಕೀಲಿ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ಜು.28: 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಅರ್ಹ ಮತ್ತು ಆಸಕ್ತ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಕಾನೂನು ಪದವೀಧರರು ಹಿಂದುಳಿದ ವರ್ಗಗಳ ಪ್ರವರ್ಗ -1, 2ಎ, 3ಎ, ಮತ್ತು 3ಬಿ ಗಳಿಗೆ ಸೇರಿದವರಾಗಿರಬೇಕು. ಪ್ರವರ್ಗ 1ಕ್ಕೆ 3.50 ಲಕ್ಷ ರೂ. ಹಾಗೂ ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿ ಪೋಷಕರ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ ಮಿತಿಯಲ್ಲಿರಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಹಿಂದಿನ ಎರಡು ವರ್ಷಗಳೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಬಾರ್ ಕೌನ್ಸಿಲ್‌ನಲ್ಲಿ ನೊಂದಾಯಿಸಿರಬೇಕು. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅನುಭವಿ ಹಾಗೂ ನುರಿತ ವಕೀಲರ ಅಧೀನದಲ್ಲಿ ವಕೀಲಿ ವೃತ್ತಿಯಲ್ಲಿ ತರಬೇತಿ ಕೊಡಿಸಿ ನಾಲ್ಕು ವರ್ಷಗಳವರೆಗೆ ತಿಂಗಳಿಗೆ 4,000ರೂ.ಗಳಂತೆ ಶಿಷ್ಯವೇತನ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿ ಗಳೊಡನೆ ಆ.11ರೊಳಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಬಿ ಬ್ಲಾಕ್, ಕೊಠಡಿ ನಂಬ್ರ: 304, 2ನೇ ಮಹಡಿ, ಮಣಿಪಾಲ ಉಡುಪಿ, ಇಲ್ಲಿಗೆ ಸಲ್ಲಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಣಿಪಾಲ ಇವರನ್ನು ಸಂಪರ್ಕಿಸಬಹುದು (ದೂರವಾಣಿ ಸಂಖ್ಯೆ; 0820-2574881, 2573881) ಎಂದು ಪ್ರಕಟಣೆ ತಿಳಿಸಿದೆ.







