ದ.ಕ. ಜಿಲ್ಲೆಯಲ್ಲಿ 5000ದ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ: ಹೊಸದಾಗಿ 173 ಮಂದಿಗೆ ಪಾಸಿಟಿವ್
ಕೊರೋನ ಸೋಂಕಿಗೆ ಮತ್ತೆ ನಾಲ್ವರು ಬಲಿ

ಮಂಗಳೂರು, ಜು.28: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದಾಗಿ ಮತ್ತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ಹೊಸದಾಗಿ 173 ಮಂದಿಗೆ ಸೋಂಕು ತಗುಲುವುದರ ಮೂಲಕ ಸೋಂಕಿತರ ಸಂಖ್ಯೆ 5000ದ ಗಡಿ ದಾಟಿದೆ.
ಮಾರಕ ಕೊರೋನ ಸೋಂಕು ಹಾವಳಿಯು ದ.ಕ. ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಂಗಳವಾರ ನಾಲ್ವರು ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 135ಕ್ಕೆ ತಲುಪಿದೆ.
ಕೋವಿಡ್‌ನಿಂದ ಮೃತಪಟ್ಟವರಲ್ಲಿ ಬಂಟ್ವಾಳದ ಇಬ್ಬರು, ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಉತ್ತರ ಕನ್ನಡದ ಭಟ್ಕಳದ ತಲಾ ಓರ್ವರು ಇದ್ದಾರೆ. ಮೃತರಲ್ಲಿ ಮೂವರು ಹಿರಿಯರಾದರೆ, ಮತ್ತೋರ್ವರು ಹದಿಹರೆಯದ ಯುವತಿ. ಖಾಸಗಿ ಆಸ್ಪತ್ರೆಯಲ್ಲಿ ಮೂವರು ಹಾಗೂ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಓರ್ವರು ಸಾವಿಗೀಡಾಗಿದ್ದಾರೆ.
ಬಂಟ್ವಾಳದ 62 ವರ್ಷದ ವೃದ್ಧ ಸೆಪ್ಸಿಸ್ ವಿತ್ ಸೆಪ್ಟಿಕ್ ಶಾಕ್, ಬಹು ಅಂಗಾಂಗ ವೈಫಲ್ಯ, ತೀವ್ರ ಚಯಾಪಚಯ ಆಮ್ಲವ್ಯಾದಿ, ಬಲಭಾಗದ ಶ್ವಾಸಕೋಶ ಸಮಸ್ಯೆ, ದೀರ್ಘಕಾಲದ ಪಿತ್ತಜನಕಾಂಗ ಕಾಯಿಲೆ, ತೀವ್ರ ರಕ್ತಹೀನತೆ, 25 ವರ್ಷದ ಯುವತಿಯು ಮೆದುಳಿನ ಕಾರ್ಟಿಕಲ್ ವೆನಸ್ ತ್ರೊಂಬೊಸಿಸ್ ಸಹಿತ ವಿವಿಧ ಮೆದುಳು ಸಮಸ್ಯೆಯಿಂದ ಬಳಲುತ್ತಿದ್ದರು.
ಹಾಸನ ಜಿಲ್ಲೆಯ ಸಕಲೇಶಪುರದ 84 ವರ್ಷದ ವೃದ್ಧ ಹೈಪೊಕ್ಷೆಮಿಯ, ತೀವ್ರ ಉಸಿರಾಟ ತೊಂದರೆ, ಹೃದಯ ಸ್ತಂಭನ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 72 ವರ್ಷದ ವೃದ್ಧ ಸೆಪ್ಟಿಕ್ ಶಾಕ್, ಕಲುಷಿತಗೊಂಡ ರಕ್ತ, ಚಯಾಪಚಯ ಸಮಸ್ಯೆ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರೆಲ್ಲ ಕೊರೋನ ಸೋಂಕು ತಗುಲಿತ್ತು ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
173 ಮಂದಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಮಂಗಳವಾರ ಹೊಸದಾಗಿ 173 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,103ಕ್ಕೆ ಏರಿಕೆಯಾಗಿದೆ.
ಸೋಂಕಿತರ ಸಂಖ್ಯೆಯಲ್ಲಿ ಶೀತ ಲಕ್ಷಣ ಹೊಂದಿದವರ ಸಂಖ್ಯೆಯೇ ಅಧಿಕ ಪ್ರಮಾಣದಲ್ಲಿದೆ. ಇದೇ ಮೊದಲ ಬಾರಿಗೆ ಶೀತ ಲಕ್ಷಣದವರ ಸಂಖ್ಯೆ ಒಂದೇ ದಿನ 91ಕ್ಕೆ ಏರಿದೆ. ಈ ಮೊದಲು ಈ ಸಂಖ್ಯೆಯು 50ರ ಆಸುಪಾಸಿನಲ್ಲಿರುತ್ತಿತ್ತು. ಸೋಂಕಿತರ ಮೂಲ ನಿಗೂಢ-38, ತೀವ್ರ ಉಸಿರಾಟ ತೊಂದರೆ-22, ಸೋಂಕಿತರ ಸಂಪರ್ಕದಲ್ಲಿದ್ದ 21ಮಂದಿ, ವಿದೇಶದಿಂದ ಆಗಮಿಸಿದ್ದ ಓರ್ವನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
41 ಮಂದಿ ಡಿಸ್ಚಾರ್ಜ್: ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮಂಗಳವಾರ 41 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಮುಕ್ತರಾದವರ ಸಂಖ್ಯೆ 2,338ಕ್ಕೆ ಏರಿದೆ. ಜಿಲ್ಲೆಯಲ್ಲಿ 2,632 ಸಕ್ರಿಯ ಪ್ರಕರರಣಗಳಿವೆ. ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಇಲ್ಲಿಯವರೆಗೆ 35,081 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 29,978 ವರದಿಗಳು ನೆಗೆಟಿವ್ ಬಂದಿದ್ದು, 5,103 ವರದಿಗಳು ಪಾಸಿಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







