9 ವರ್ಷಗಳಲ್ಲೇ ಅತಿ ಹೆಚ್ಚು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಬೀಗ!
ಈ ವರ್ಷ 179 ವೃತ್ತಿಪರ ಕಾಲೇಜುಗಳು ಬಂದ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು. 28: ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಹಾಗೂ ಬ್ಯುಸಿನಸ್ ಸ್ಕೂಲ್ಗಳ ಸಹಿತ ಸುಮಾರು 179 ವೃತ್ತಿಪರ ಕಾಲೇಜುಗಳು 2020-21 ಶೈಕ್ಷಣಿಕ ವರ್ಷದಿಂದ ಮುಚ್ಚಿವೆ. ಅತಿ ಹೆಚ್ಚು ತಾಂತ್ರಿಕ ಸಂಸ್ಥೆಗಳು ಮುಚ್ಚಿರುವುದು ಕಳೆದ 9 ವರ್ಷಗಳಲ್ಲಿ ಇದೇ ಮೊದಲು ಎಂದು ತಾಂತ್ರಿಕ ಶಿಕ್ಷಣದ ಅಖಿಲ ಭಾರತ ಮಂಡಳಿ (ಎಐಸಿಟಿಇ) ದತ್ತಾಂಶ ಹೇಳಿದೆ.
ಕಳೆದ 5 ವರ್ಷಗಳಿಂದ ದೊಡ್ಡ ಸಂಖ್ಯೆಯಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಸಾಧ್ಯವಾಗದೇ ಇರುವುದರಿಂದ ಸಂಸ್ಥೆ ನಡೆಸಲು ಸಾಧ್ಯವಾಗದೆ ಕನಿಷ್ಠ 134 ಸಂಸ್ಥೆಗಳು ಮರು ಅನುಮತಿಗೆ ಮನವಿ ಮಾಡಿಲ್ಲ. ಅಲ್ಲದೆ, ತಾಂತ್ರಿಕ ಶಿಕ್ಷಣ ನಿಯಂತ್ರಕ ಮಂಡಳಿಯಿಂದ ದಂಡನಾತ್ಮಕ ಕ್ರಮಗಳಿಂದ ಕನಿಷ್ಠ 44 ಸಂಸ್ಥೆಗಳು ಅನುಮತಿ ಪಡೆದಿಲ್ಲ ಅಥವಾ ಅದರ ಅನುಮತಿಗಳನ್ನು ಹಿಂದೆಗೆದುಕೊಳ್ಳಲಾಗಿದೆ. ಶೈಕ್ಷಣಿಕ ವರ್ಷ 2019-20ರಲ್ಲಿ 92, 2018-19ರಲ್ಲಿ 89, 2017-18ರಲ್ಲಿ 134, 2016-17ರಲ್ಲಿ 163, 2015-16ರಲ್ಲಿ 126 ಹಾಗೂ 2014-15ರಲ್ಲಿ 77 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿವೆ ಎಂದು ಎಐಸಿಟಿಇ ವರದಿ ತಿಳಿಸಿದೆ.





