ಉಡುಪಿ: ವಿಧಾನಪರಿಷತ್ ಸದಸ್ಯರ ಆಪ್ತಸಹಾಯಕನಿಗೆ ಕೊರೋನ ಪಾಸಿಟಿವ್

ಉಡುಪಿ, ಜು.28: ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ವಿಧಾನಪರಿಷತ್ ಸದಸ್ಯರ ಆಪ್ತ ಸಹಾಯಕರು (31) ಇಂದು ಕೊರೋನ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಅವರನ್ನು ಇದೀಗ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ ಹಿಲಿಯಾಣದಲ್ಲಿರುವ ಅವರ ಮನೆ ಹಾಗೂ ಅಕ್ಕಪಕ್ಕದ ಎರಡು ಮನೆಗಳನ್ನು ಸಹ ಸೀಲ್‌ಡೌನ್ ಮಾಡಲಾಗಿದೆ ಎಂದು ಕೋಟದ ಆರ್‌ಐ ರಾಜು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಎಂಎಲ್‌ಸಿ ಅವರ ಗನ್‌ಮ್ಯಾನ್ ಹಾಗೂ ಅವರ ಕುಟುಂಬದ ಎಂಟು ಮಂದಿ ಸದಸ್ಯರಿಗೆ ಸೋಂಕು ದೃಢಪಟ್ಟಿತ್ತು. ಗನ್‌ಮ್ಯಾನ್ ಹಾಗೂ ಆಪ್ತಸಹಾಯಕರು ಬೆಂಗಳೂರಿನಿಂದ ಒಟ್ಟಿಗೆ ಊರಾದ ಹಿಲಿಯಾಣಕ್ಕೆ ಬಂದಿದ್ದರೆಂದು ಹೇಳಲಾಗಿದೆ. ಇದೀಗ ಆಪ್ತಸಹಾಯಕರ ಮನೆಯ ಉಳಿದ ಸದಸ್ಯರ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು, ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.
ಅಲ್ಲದೇ ಸಾಸ್ತಾನ ಐರೋಡಿಯಲ್ಲಿ ಕೆಎಂಸಿಯ ನರ್ಸ್ ಒಬ್ಬರು ಪಾಸಿಟಿವ್ ಬಂದಿದ್ದು, ಅಲ್ಲಿ ನಾಲ್ಕು ಮನೆಗಳನ್ನು ಹಾಗೂ ಕೋಡಿಯಲ್ಲಿ ಒಬ್ಬರಲ್ಲಿ ಪಾಸಿಟಿವ್ ಬಂದಿದ್ದು ಅಲ್ಲಿನ ನಾಲ್ಕು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಯಡ್ತಾಡಿಯಲ್ಲಿ ಇಬ್ಬರು, ಹೇರಾಡಿಯಲ್ಲಿ ಒಬ್ಬರು ಪಾಸಿಟಿವ್ ಬಂದಿದ್ದು, ಅವರ ಮನೆಗಳನ್ನೂ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೈಂದೂರಿನಲ್ಲಿ ಒಟ್ಟು 7 ಪಾಸಿಟಿವ್ ಬಂದಿದ್ದು, ಬಿಜೂರು-1, 11 ಉಳ್ಳೂರು-1, ಬೈಂದೂರು-2. ಯಡ್ತರೆ-2 ಹಾಗೂ ಕೆರ್ಗಾಲ್-1 ಪಾಸಿಟಿವ್ ಬಂದಿದ್ದು, ಇಲ್ಲಿನ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಒಟ್ಟು 59 ಕಂಟೈನ್‌ಮೆಂಟ್ ವಲಯವನ್ನು ಇಂದು ಘೋಷಿಸಲಾಗಿದೆ.
ಉಡುಪಿ ತಾಲೂಕಿನಲ್ಲಿ ಒಟ್ಟು 31 ಕಂಟೈನ್‌ಮೆಂಟ್ ವಲಯಗಳನ್ನು ಮಾಡಲಾಗಿದೆ. 76 ಬಡಗುಬೆಟ್ಟು-6, ಮೂಡನಿಡಂಬೂರು-5, ಕೊಡವೂರು- 6, ಪುತ್ತೂರು-3, 80 ಬಡಗುಬೆಟ್ಟು-3, ಹೆರ್ಗ-6, ಅಂಬಲಪಾಡಿ-1, ಕೊರಂಗ್ರಪಾಡಿ-1 ಈ ವಲಯಗಳಿವೆ.







