ಕ್ವಾರಂಟೇನ್ ನಿಯಮ ಉಲ್ಲಂಘಿಸಿದ 69 ಮಂದಿ ವಿರುದ್ದ ಪ್ರಕರಣ: ಉಡುಪಿ ಡಿಸಿ ಜಗದೀಶ್

ಉಡುಪಿ, ಜು.28: ಕೋವಿಡ್-19ಗೆ ಸಂಬಂಧಿಸಿ ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘಿಸಿರುವ ಉಡುಪಿ ಜಿಲ್ಲೆಯ ಒಟ್ಟು 69 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಗೆ ವಿದೇಶ ಹೊರ ರಾಜ್ಯಗಳಿಂದ ಬಂದಿರುವ ವ್ಯಕ್ತಿಗಳು ಹಾಗೂ ಕೋವಿಡ್ ಪಾಸಿಟಿವ್ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಅವರು 14 ದಿನ ಹೋಂ ಕ್ವಾರಂಟೇನ್ನಲ್ಲಿ ಇರುವುದು ಕಡ್ಡಾಯವಾಗಿದೆ. ಆದರೆ ಕೆಲವರು ನಿಯಮ ಬಾಹಿರವಾಗಿ ಹೊರಗಡೆ ತಿರುಗಾಡುವುದು ಕಂಡುಬಂದಿದೆ. ಇದರಿಂದ ಕೊರೋನ ನಿಯಂತ್ರಣದಲ್ಲಿ ಹಿನ್ನಡೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ನಿಗಾ ಇಡಲು ಕ್ವಾರಂಟೈನ್ ವಾಚ್ ಆ್ಯಪ್ ತಂತ್ರಜ್ಞಾನದ ಬಳಕೆಯಾಗುತ್ತಿದ್ದು, ಇದರಿಂದ ಹೋಮ್ ಕ್ವಾರಂಟೈನ್ ಮಾಡುತ್ತಿರುವ ವ್ಯಕ್ತಿಗಳ ಮಾಹಿತಿ ಲಭ್ಯ ವಾಗುತ್ತಿದೆ. ಅಂತಹವರ ವಿರುದ್ದ ಈಗಾಗಲೇ ಅಧಿಕಾರಿಗಳು ಅವರ ಮನೆ ಭೇಟಿ ಮಾಡಿ ಎಚ್ಚರಿಕೆಗಳನ್ನು ಕೊಟ್ಟು ಹೊರಗಡೆ ತಿರುಗಾಟ ನಡೆಸದಂತೆ ಮನವರಿಕೆ ಮಾಡಿದರೂ ಕೂಡ ನಿಯಮಗಳನ್ನು ಪಾಲಿಸದೇ ಪುನಃರಪಿ ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೋಂ ಕ್ವಾರಂಟೈನ್ ಹಾಗೂ ಹೋಂ ಐಸೋಲೇಷನ್ನಲ್ಲಿರುವ ಯಾರೂ ಕೂಡ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿ ಹೊರಗಡೆ ತಿರುಗಾಟ ನಡೆಸ ಬಾರದಾಗಿ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗು ವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣಿಪಾಲದಲ್ಲಿ 22 ಮಂದಿ ವಿರುದ್ಧ ಮೊಕದ್ದಮೆ
ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದ ಒಟ್ಟು 22 ಮಂದಿ ವಿರುದ್ಧ ಜು.27ರಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲದ ಮಧುಕರ್ ಶೆಟ್ಟಿ, ಡಾ.ಮಯಾಂಕ್ ಗುಪ್ತ, ಸಂಗಿಕ್ ರಾಯ್, ತೇಜಸ್ ಸಿಂಗ್ ಗ್ರೋವರ್, ಅರುಣ್ ಸತ್ಯನಾರಾಯಣ, ಕೃಷ್ಣಸಾಯಿ ಧನೆಕುಲ, ಎಶಿತಾ ಬಂಸಾಯಿ, ಸಹನಾ, ಮೆರಿನ್, ಸುಮತಿ, ಶ್ರುತಿ, ಸರಳಾ, ರಾಘವೇಂದ್ರ, ಮಹಿಮಾ, ಜಯಶ್ರೀ, ಮೇರಿ, ಗೌತಮ್, ಹೇಮವತಿ, ವೈಷಕ್, ಶಾಹಿನಿ ಶ್ರಿವಾಸ್ತ, ದಿವಾಕರ್ ನಾರಿ, ದಿವ್ಯಾ ಎಂಬವರು ನಿಯಮ ಉಲ್ಲಂಘಿಸಿದ್ದಾರೆ. ಇವರಲ್ಲಿ ಕನಿಷ್ಠ 50 ಬಾರಿ ಮತ್ತು ಗರಿಷ್ಠ 186 ಬಾರಿ ನಿಯಮ ಉಲ್ಲಂಘಿಸಿದವರು ಸೇರಿದ್ದಾರೆ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮೋಹನ್ ರಾಜ್ ಕೆ.ಎಂ. ತಿಳಿಸಿದ್ದಾರೆ.







