ಬೆಂಗಳೂರು: ಸ್ಕೂಟರ್ ಕಳವಿನ ಸುದ್ದಿ ಕೇಳಿ ಮಹಿಳೆಗೆ ಹೃದಯಾಘಾತ
ಬೆಂಗಳೂರು, ಜು.28: ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿರುವ ವಿಚಾರ ತಿಳಿದು ಮಹಿಳೆಯೊಬ್ಬರು ಸ್ಥಳದಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕತ್ರಿಗುಪ್ಪೆಯ ಕಾವೇರಿ ನಗರದ ಮಮತಾ ಎಂಬುವರಿಗೆ ಹೃದಯಾಘಾತವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜು.13 ರಂದು ಮಮತಾ, ಚಾಮರಾಜಪೇಟೆ ಠಾಣಾ ವ್ಯಾಪ್ತಿಯ ಗೌರಿ ಶಂಕರ ದೇವಸ್ಥಾನಕ್ಕೆ ಪೂಜೆಗೆ ಸ್ಕೂಟರ್ ನಲ್ಲಿ ಹೋಗಿದ್ದರು. ದೇವಸ್ಥಾನದ ಹೊರಗೆ ಸ್ಕೂಟರ್ ನಿಲ್ಲಿಸಿ ಒಳ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿತ್ತು. ಸ್ಕೂಟರನ್ನು ಅದೇ ದೇವಸ್ಥಾನಕ್ಕೆ ಬಂದಿದ್ದ ವೃದ್ಧರೊಬ್ಬರು ಕದ್ದು ಪರಾರಿಯಾಗಿದ್ದರು. ಅಷ್ಟೇ ಅಲ್ಲದೆ, ಸ್ಕೂಟರ್ ಕಳವಿಗೆ ಮುನ್ನ ಮಹಿಳೆ ಬಳಿ ಇದ್ದ ಬೈಕ್ ಕೀಯನ್ನು ವೃದ್ಧ ಕಳವು ಮಾಡಿದ್ದ ಎನ್ನಲಾಗಿದೆ.
ದೇವಸ್ಥಾನದಿಂದ ಹೊರ ಬಂದ ಮಹಿಳೆಗೆ ಸ್ಕೂಟರ್ ಕಳ್ಳತನ ಆಗಿರುವುದು ತಿಳಿದಿದ್ದು, ಪ್ರಜ್ಞೆ ತಪ್ಪಿ ಹೃದಯಾಘಾತವಾಗಿ ಕೆಳಗೆ ಬಿದ್ದಿದ್ದಾರೆ.
ಸ್ಕೂಟರ್ ಕಳವಿನ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕನ್ನು ವೃದ್ಧ ಕಳ್ಳತನ ಮಾಡಿರುವ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.





