ಜಮ್ಮು-ಕಾಶ್ಮೀರದಲ್ಲಿ 4ಜಿ ನೆಟ್‌ವರ್ಕ್ ಮರುಸ್ಥಾಪನೆಯ ವರದಿ ಪರಿಶೀಲನೆ: ಸುಪ್ರೀಂಗೆ ಕೇಂದ್ರದ ಹೇಳಿಕೆ

ಹೊಸದಿಲ್ಲಿ, ಜು.28: ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ನೆಟ್‌ವರ್ಕ್ ಸಂಪರ್ಕವನ್ನು ಮರು ಸ್ಥಾಪಿಸಬಹುದು ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಜಿಸಿ ಮುರ್ಮು ಹಾಗೂ ಬಿಜೆಪಿ ಮುಖಂಡ ರಾಮಮಾಧವ್ ಹೇಳಿದ್ದಾರೆ ಎಂಬ ವರದಿಯನ್ನು ಪರಿಶೀಲಿಸುವುದಾಗಿ ಕೇಂದ್ರ ಸರಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಕಳೆದ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು ಅಂದಿನಿಂದ ಹೈಸ್ಪೀಡ್ ಇಂಟರ್‌ನೆಟ್ ವ್ಯವಸ್ಥೆಯನ್ನು ಮೊಟಕುಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಎಂಬ ಎನ್‌ಜಿಒ ಸಂಘಟನೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕಳಿಸಿದ್ದ ನೋಟಿಸ್‌ಗೆ ಉತ್ತರಿಸಿದ್ದ ಕೇಂದ್ರ ಸರಕಾರ, 4ಜಿ ಇಂಟರ್‌ನೆಟ್ ನಿಷೇಧದ ಬಗ್ಗೆ ವಿಶೇಷ ಸಮಿತಿ ಪರಿಶೀಲಿಸುತ್ತಿದೆ ಎಂದು ತಿಳಿಸಿತ್ತು.
ಈ ಮಧ್ಯೆ, ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ್ದ ಅರ್ಜಿದಾರರು, 4 ಜಿ ಇಂಟರ್‌ನೆಟ್ ಮರುಸ್ಥಾಪಿಸುವ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಹಾಗೂ ಬಿಜೆಪಿ ನಾಯಕರ ಹೇಳಿಕೆಯನ್ನೂ ನ್ಯಾಯಾಲಯ ಪರಿಗಣಿಸಬೇಕು ಎಂದು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರ, ಈ ಹೇಳಿಕೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದೆ. ಬಳಿಕ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 7ಕ್ಕೆ ಮುಂದೂಡಿತು.







