ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾರಾಟ ದಂಧೆ: ಉಡುಪಿ ಮೂಲದ 21 ವರ್ಷದ ಯುವಕ ಸಿಐಡಿ ಬಲೆಗೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.28: ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯೊಂದನ್ನು ಬೇಧಿಸಿರುವ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು, ಯುವಕನೋರ್ವನನ್ನು ಬಂಧಿಸಿದ್ದಾರೆ.
ಉಡುಪಿ ಮೂಲದ ಸುಮಾರು 21 ವರ್ಷದ ಸೌರವ್ ಶೆಟ್ಟಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಸರಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದಿಂದ ಸೈಬರ್ ಟಿಪ್ಲೈನ್ ವರದಿಯ ಮೂಲಕ ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ದೃಶ್ಯಾವಳಿಗಳನ್ನು ಆನ್ಲೈನ್ನಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಸಂದೇಶವಾಹಕ ವೇದಿಕೆಗಳ ಮೂಲಕ ಹಂಚಿಕೆ ಮಾಡಿ ಅಪರಾಧ ಎಸಗುತ್ತಿರುವ ಬಗ್ಗೆ ಕರ್ನಾಟಕ ರಾಜ್ಯದ ನೋಡಲ್ ಅಧಿಕಾರಿ ಅವರಿಂದ ಮಾಹಿತಿಯನ್ನು ಸ್ವೀಕರಿಸಿದ್ದ ಅನ್ವಯ ಸಿಐಡಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಜು.7ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಗಳ ಅನ್ವಯ ಪ್ರಕರಣ ದಾಖಲಾಗಿತ್ತು.
ಸಿಐಡಿ ಘಟಕದ ಮೇಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಡಿಎಸ್ಪಿ ಯಶವಂತಕುಮಾರ್ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು ತನಿಖೆಯನ್ನು ಕೈಗೊಂಡು, ರಾಷ್ಟ್ರೀಯ ಮಟ್ಟದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ದೃಶ್ಯಾವಳಿಗಳನ್ನು ಆನ್ಲೈನ್ ಮೂಲಕ ಹಂಚಿಕೆ ಮಾಡಿ ಕೃತ್ಯವೆಸಗುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿ ಸೌರವ್ ಶೆಟ್ಟಿಯನ್ನು ಬಂಧಿಸಲಾಗಿದೆ ಎಂದು ಸಿಐಡಿ ಹಿರಿಯ ಅಧಿಕಾರಿಗಳು ತಿಳಿಸಿದರು.
ಆರೋಪಿ ಬಳಿಯಿದ್ದ ನಿರ್ಬಂಧಿತ ದೃಶ್ಯಾವಳಿ, ಡಿಜಿಟಲ್ ಉಪಕರಣಗಳು, ಸಾಮಾಜಿಕ ಜಾಲತಾಣಗಳು ಮತ್ತು ಆನ್ಲೈನ್ ಕ್ಲೌಡ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇನ್ನು, ಕೃತ್ಯದಲ್ಲಿ ಆರೋಪಿಯೊಂದಿಗೆ ಭಾಗಿಯಾಗಿದ್ದ ಅನ್ಯ ರಾಜ್ಯಗಳ ಹಲವಾರು ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಸಿಐಡಿ ತಿಳಿಸಿದೆ.