ಭ್ರಷ್ಟಾಚಾರ ಹಗರಣ: ಮಲೇಶ್ಯ ಮಾಜಿ ಪ್ರಧಾನಿ ನಜೀಬ್ ಗೆ 12 ವರ್ಷ ಜೈಲು
ಕೌಲಾಲಂಪುರ (ಮಲೇಶ್ಯ), ಜು. 28: ನೂರಾರು ಕೋಟಿ ಡಾಲರ್ ಮೊತ್ತವನ್ನೊಳಗೊಂಡ '1 ಮಲೇಶ್ಯ ಡೆವೆಲಪ್ ಮೆಂಟ್ ಬರ್ಹಾರ್ಡ್ (1ಎಮ್‌ಡಿಬಿ)' ಹೂಡಿಕೆ ನಿಧಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಮಲೇಶ್ಯದ ಮಾಜಿ ಪ್ರಧಾನಿ ನಜೀಬ್ ರಝಾಕ್‌ಗೆ ನ್ಯಾಯಾಲಯವೊಂದು ಮಂಗಳವಾರ 12 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
'1ಎಮ್‌ಡಿಬಿ' ಸಾರ್ವಭೌಮ ಹೂಡಿಕೆ ನಿಧಿಯನ್ನು ದೋಚಿರುವುದಕ್ಕೆ ಸಂಬಂಧಿಸಿದ ಪ್ರಕರಣದ ಮೊದಲ ವಿಚಾರಣೆಯಲ್ಲಿ ಮಾಜಿ ಪ್ರಧಾನಿ ವಿರುದ್ಧದ ಎಲ್ಲ ಆರೋಪಗಳು ಸಾಬೀತಾಗಿವೆ. ಅವರಿಗೆ 50 ಮಿಲಿಯ ಡಾಲರ್ (ಸುಮಾರು 375 ಕೋಟಿ ರೂಪಾಯಿ) ದಂಡವನ್ನೂ ನ್ಯಾಯಾಲಯ ವಿಧಿಸಿದೆ.
ಆದರೆ, ಕೆಳ ನ್ಯಾಯಾಲಯದ ಈ ತೀರ್ಪನ್ನು 67 ವರ್ಷದ ಮಾಜಿ ಪ್ರಧಾನಿ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ. ಈ ಸುದೀರ್ಘ ಮೇಲ್ಮನವಿ ಪ್ರಕ್ರಿಯೆ ಮುಗಿಯುವವರೆಗೂ ಅವರ ಜಾಮೀನನ್ನು ವಿಸ್ತರಿಸಲಾಗಿದ್ದು, ಅವರು ಸ್ವತಂತ್ರರಾಗಿರುತ್ತಾರೆ.
ಈ ಹೂಡಿಕೆ ನಿಧಿಯಿಂದ ನೂರಾರು ಕೋಟಿ ಡಾಲರ್ ಹಣವನ್ನು ಕದಿಯಲಾಯಿತು ಹಾಗೂ ಉನ್ನತ ಮಟ್ಟದ ರಿಯಲ್ ಎಸ್ಟೇಟ್‌ನಿಂದ ಹಿಡಿದು ದುಬಾರಿ ಕಲಾಕೃತಿಗಳವರೆಗಿನ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಆ ಹಣವನ್ನು ಬಳಸಲಾಯಿತು ಎಂದು ಆರೋಪಿಸಲಾಗಿತ್ತು. ಹೂಡಿಕೆ ಬ್ಯಾಂಕ್ ಗೋಲ್ಡ್‌ಮಕನ್ ಸ್ಯಾಕ್ಸ್ ಕೂಡ ಈ ಹಗರಣದಲ್ಲಿ ಶಾಮೀಲಾಗಿತ್ತು.
ಈ ಬೃಹತ್ ಪ್ರಮಾಣದ ಭ್ರಷ್ಟಾಚಾರದ ವಿರುದ್ಧ ಜನರು ಸಿಡಿದೆದ್ದಿದ್ದು, 2018ರ ಚುನಾವಣೆಯಲ್ಲಿ ನಜೀಬ್ ಸೋಲುಂಡಿದ್ದರು. ಚುನಾವಣಾ ಫಲಿತಾಂಶದ ಬೆನ್ನಿಗೇ ಅವರನ್ನು ಬಂಧಿಸಲಾಗಿತ್ತು ಹಾಗೂ ಡಝನ್‌ಗಟ್ಟಳೆ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿತ್ತು.
ಈ ಪ್ರಕರಣವು ಮಲೇಶ್ಯದ ಕಾನೂನಿನ ಆಡಳಿತಕ್ಕೆ ಒಂದು ಸವಾಲಾಗಿತ್ತು. ಅಧಿಕಾರ ಕಳೆದುಕೊಂಡ ಐದೇ ತಿಂಗಳಲ್ಲಿ ನಜೀಬ್‌ರ ಹಗರಣ ಪೀಡಿತ ಪಕ್ಷವು ಮೈತ್ರಿಕೂಟದ ಭಾಗವಾಗಿ ಅಧಿಕಾರಕ್ಕೆ ಮರಳಿತ್ತು. ಇದು ನ್ಯಾಯಾಲಯದ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿಯನ್ನು ವೀಕ್ಷಕರು ವ್ಯಕ್ತಪಡಿಸಿದ್ದರು.
ಅವರು ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ನ್ಯಾಯಾಲಯವು ಅವರ ಶಿಕ್ಷೆಯ ಪ್ರಮಾಣವನ್ನು ಯಾವಾಗ ಘೋಷಿಸುವುದು ಎನ್ನುವುದು ಸ್ಪಷ್ಟವಾಗಿಲ್ಲ.
ಭ್ರಷ್ಟಾಚಾರದ ಹಣದಿಂದ ಹಾಲಿವುಡ್ ಚಿತ್ರ ನಿರ್ಮಾಣ!
ನಜೀಬ್ ರಝಾಕ್‌ರ ಮಲಮಗ ರಿಝಾ ಅಝೀಝ್ ಕೂಡ '1ಎಮ್‌ಡಿಬಿ' ಹೂಡಿಕೆ ನಿಧಿಯಿಂದ ಅಗಾಧ ಮೊತ್ತದ ಹಣವನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಹೀಗೆ ಗಳಿಸಿದ ಹಣವನ್ನು ಅವರು ತನ್ನ ಹಾಲಿವುಡ್ ಚಿತ್ರ ನಿರ್ಮಾಣ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರು. ಅವರ ಕಂಪೆನಿಯು ಲಿಯೊನಾರ್ಡೊ ಡಿಕ್ಯಾಪ್ರಿಯೊ ನಾಯಕ ನಟನಾಗಿ ನಟಿಸಿರುವ 'ದ ವೂಲ್ಫ್ ಆಫ್ ವಾಲ್ ಸ್ಟ್ರೀಟ್' ಚಿತ್ರವನ್ನು 2013ರಲ್ಲಿ ನಿರ್ಮಿಸಿತ್ತು.
ಈ ಚಿತ್ರವನ್ನು 100 ಮಿಲಿಯ ಡಾಲರ್ (ಸುಮಾರು 750 ಕೋಟಿ ರೂಪಾಯಿ) ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಅದು ಬಾಕ್ಸ್‌ಆಫೀಸ್‌ನಲ್ಲಿ 392 ಮಿಲಿಯ ಡಾಲರ್ (ಸುಮಾರು 2,935 ಕೋಟಿ ರೂಪಾಯಿ) ಗಳಿಸಿತ್ತು.
ಆದರೆ, ಅಧಿಕಾರ ಕಳೆದುಕೊಂಡ ಐದೇ ತಿಂಗಳಲ್ಲಿ ನಜೀಬ್‌ರ ಪಕ್ಷವು ಅಧಿಕಾರಕ್ಕೆ ಮರಳಿದ ಕೂಡಲೇ ರಿಝಾ ಅಝೀಝ್ ವಿರುದ್ಧದ ಆರೋಪಗಳನ್ನು ಕೈಬಿಡಲಾಯಿತು.







