ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ: ಶೀಘ್ರ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ
ಮಂಗಳೂರು: ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಒಡ್ಡಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಇದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಾಂತಿಯುತವಾಗಿರುವ ಮಂಗಳೂರಿನಲ್ಲಿ ಕೋಮು ಸಾಮರಸ್ಯ ಕೆಡಿಸುವ ಉದ್ದೇಶದಿಂದ ಸಂಘಪರಿವಾರದ ಕಾರ್ಯಕರ್ತರು ಸಕ್ರಮ ಗೋ ಸಾಗಾಟಗಾರರ ಮೇಲೆ ಸರಣಿ ದಾಳಿಯನ್ನು ಮುಂದುವರಿಸಿದ್ದಾರೆ. ಇದರ ವಿರುದ್ಧ ಈಗಾಗಲೇ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಾನುವಾರು ವ್ಯಾಪಾರದ ವಾಹನ ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಇದೀಗ ಸೂಚನೆ ರವಾನಿಸಿದ್ದಾರೆ. ಆದರೆ ಓರ್ವ ಮಹಿಳೆ ಎಂದೂ ಗೌರವಿಸದೆ ಅವರಿಗೆ ಕೊಲೆ ಬೆದರಿಕೆಯನ್ನು ಒಡ್ಡಲಾಗಿದ್ದು, ಇದು ಅವರ ಹೀನ ಮನೋಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಜಿಲ್ಲಾಧಿಕಾರಿಯವರಿಗೆ ಕೊಲೆ ಬೆದರಿಕೆಯೊಡ್ಡಿರುವ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಮತ್ತು ಸಮಾಜದ ಶಾಂತಿ ಕದಡುವ ಇಂತಹ ವಾಟ್ಸಪ್ ಗ್ರೂಪ್ ಗಳ ಮೇಲೆ ನಿಗಾವಹಿಸಬೇಕೆಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.





