ಪಾಕ್, ನೇಪಾಳ, ಅಫ್ಘಾನ್ ಜೊತೆಗೆ ಚೀನಾ ಸಮ್ಮೇಳನ
ನಾಲ್ಕು-ಅಂಶಗಳ ಕಾರ್ಯಕ್ರಮದ ಬಗ್ಗೆ ಚರ್ಚೆ
ಬೀಜಿಂಗ್, ಜು. 28: ಚೀನಾ ವಿದೇಶ ಸಚಿವ ವಾಂಗ್ ಯಿ ಸೋಮವಾರ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳಗಳ ವಿದೇಶ ಸಚಿವರೊಂದಿಗೆ ಅಶರೀರ (ವರ್ಚುವಲ್) ಸಮ್ಮೇಳನ ನಡೆಸಿದ್ದು, ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕವನ್ನು ಹತೋಟಿಗೆ ತರುವುದು, ಆರ್ಥಿಕ ಚೇತರಿಕೆಗೆ ಇಂಬು ನೀಡುವುದು ಮತ್ತು ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್‌ಐ)ನಡಿಯಲ್ಲಿ ಬರುವ ಮೂಲಸೌಕರ್ಯ ಯೋಜನೆಗಳಿಗೆ ಮರುಚಾಲನೆ ನೀಡುವುದು ಸೇರಿದಂತೆ ನಾಲ್ಕು-ಅಂಶಗಳ ಕಾರ್ಯಕ್ರಮವೊಂದನ್ನು ಮುಂದಿಟ್ಟಿದ್ದಾರೆ.
ಅಫ್ಘಾನಿಸ್ತಾನದ ಉಸ್ತುವಾರಿ ವಿದೇಶ ಸಚಿವ ಮುಹಮ್ಮದ್ ಹನೀಫ್ ಅತ್ಮರ್ ಮತ್ತು ನೇಪಾಳದ ವಿದೇಶ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಈ ವೀಡಿಯೊ ಲಿಂಕ್ ಮೂಲಕ ನಡೆದ ಅಶರೀರ ಸಮ್ಮೇಳನದಲ್ಲಿ ಭಾಗವಹಿಸಿದರು ಎಂದು ಚೀನಾದ ವಿದೇಶ ಸಚಿವಾಲಯವು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆದರೆ, ಈ ಸಮ್ಮೇಳನದಲ್ಲಿ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಭಾಗವಹಿಸಲಿಲ್ಲ. ಪಾಕಿಸ್ತಾನವನ್ನು ಆ ದೇಶದ ಆರ್ಥಿಕ ವ್ಯವಹಾರಗಳ ಸಚಿವ ಮಖ್ದೂಮ್ ಖುಸ್ರೊ ಬಖ್ತಿಯಾರ್ ಪ್ರತಿನಿಧಿಸಿದರು.
ಇದು ಈ ನಾಲ್ಕು ದೇಶಗಳು ಜೊತೆಯಾಗಿ ಭಾಗವಹಿಸಿದ ಮೊದಲ ಸಮ್ಮೇಳನವಾಗಿದೆ. ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಚೀನಾ ವಿದೇಶ ಸಚಿವ ವಾಂಗ್, ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧದ ಏಕತೆ ಮತ್ತು ಹೋರಾಟಕ್ಕೆ ಸಂಬಂಧಿಸಿದ ಒಮ್ಮತವನ್ನು ಬಲಪಡಿಸುವುದು, ಕೊರೋನ ವೈರಸನ್ನು ರಾಜಕೀಕರಣಗೊಳಿಸುವುದರಿಂದ ದೂರ ಇರುವುದು ಹಾಗೂ ಜಾಗತಿಕ ಆರೋಗ್ಯ ಸಮುದಾಯವನ್ನು ನಿರ್ಮಿಸುವಲ್ಲಿನ ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ನೀಡುವುದು ಸೇರಿದಂತೆ ನಾಲ್ಕು ಅಂಶಗಳ ಕ್ರಿಯಾ ಂಯೋಜನೆಯನ್ನು ಮುಂದಿಟ್ಟರು.