ಕೆ.ಆರ್.ಪೇಟೆಯ ಖ್ಯಾತ ವ್ಯೆದ್ಯ ಕೊರೋನ ಸೋಂಕಿಗೆ ಬಲಿ

ಕೆ.ಆರ್.ಪೇಟೆ, ಜು.28: ಪಟ್ಟಣದ ಖ್ಯಾತ ವ್ಯೆದ್ಯ (ವಾತ್ಸಲ್ಯ ಕ್ಲಿನಿಕ್) ಡಾ.ಎ.ಎಸ್.ಪ್ರಕಾಶ್ ಕೊರೋನ ಸೋಂಕಿನಿಂದಾಗಿ ಮಂಗಳವಾರ ಬೆಳಗ್ಗೆ ಮೃತ ಪಟ್ಟಿದ್ದಾರೆ.
ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತಾಲೂಕು ಆಡಳಿತದ ವತಿಯಿಂದ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕುಟುಂಬದ ಮನವಿಯ ಮೇರೆಗೆ ಮೈಸೂರಿನ ಜೆಎಸ್‍ಎಸ್ ಕೋವಿಡ್-19 ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೂಕನಕೆರೆ ಹೋಬಳಿಯ ಪೇಟೆ ಅರಳಕುಪ್ಪೆ ಗ್ರಾಮದ ಡಾ.ಎ.ಎಸ್.ಪ್ರಕಾಶ್ ಸುಮಾರು 30 ವರ್ಷದಿಂದ ಪಟ್ಟಣದಲ್ಲಿ ವಾತ್ಸಲ್ಯ ಚಿಕಿತ್ಸಾಲಯ ತೆರೆದು ಕಡಿಮೆ ದರದಲ್ಲಿ ಗ್ರಾಮೀಣ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಬಡ ಜನರ ಪ್ರೀತಿ ಪಾತ್ರ ವೈದ್ಯರಾಗಿದ್ದರು. ಯಾರಾದರೂ ರೋಗಿಗಳು ತಮ್ಮಲ್ಲಿಗೆ ಬಂದು ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಬೇಕಾದ ಸಂದರ್ಭದಲ್ಲಿ ವೈದ್ಯರು ತಾವೇ ಹಣ ನೀಡಿ ಕಳುಹಿಸುತ್ತಿದ್ದರು. ಹುಷಾರಾದ ಮೇಲೆ ಸಾಧ್ಯವಾದರೆ ಹಣ ತಂದು ಕೊಡಿ ಎಂದು ಹೇಳಿ ಕಳುಹಿಸುತ್ತಿದ್ದರು.
ಡಾ.ಪ್ರಕಾಶ್ ಅವರ ನಿಧನದಿಂದ ತಾಲೂಕಿನ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ವಕೀಲ ಹೊನ್ನೇನಹಳ್ಳಿ ಎಚ್.ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಅಗ್ರಹಾರಬಾಚಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ ಕಂಬನಿ ಮಿಡಿದಿದ್ದಾರೆ. ತಾಲೂಕು ಭಾರತೀಯ ವೈದ್ಯರ ಸಂಘದ ಡಾ.ಅರವಿಂದ್, ಡಾ.ಬಿ.ಇ.ದಿನೇಶ್, ಡಾ.ದಿವಾಕರ್, ಡಾ.ಗುಪ್ತಾ, ಡಾ.ರಾಜೇಶ್ವರಿ, ಪುರಸಭೆ ಸದಸ್ಯ ಲೋಕೇಶ್, ಇತರ ಗಣ್ಯರು ಡಾ.ಪ್ರಕಾಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪರೀಕ್ಷೆಗೆ ಮನವಿ: ಡಾ.ಪ್ರಕಾಶ್ ಅವರ ವಾತ್ಸಲ್ಯ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಎಂ.ಶಿವಮೂರ್ತಿ ಮನವಿ ಮಾಡಿದ್ದಾರೆ.







