ಪಠ್ಯ ಪುಸ್ತಕದಿಂದ ಟಿಪ್ಪು ಅಧ್ಯಾಯ ಕೈಬಿಟ್ಟಿರುವ ಕ್ರಮ ಖಂಡನೀಯ: ಎಸ್ಡಿಪಿಐ

ಇಲ್ಯಾಸ್ ಮುಹಮ್ಮದ್ ತುಂಬೆ
ಬೆಂಗಳೂರು, ಜು.28: ಕೋವಿಡ್-19 ನೆಪವನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರ 7ನೇ ತರಗತಿಯ ಪಠ್ಯಪುಸ್ತಕದಿಂದ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯವನ್ನು ಕೈಬಿಟ್ಟಿರುವ ಕ್ರಮ ಖಂಡನೀಯವೆಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೋನ ಹಿನ್ನೆಲೆಯಲ್ಲಿ ಶಾಲಾ ದಿನಗಳು ಕಡಿತಗೊಂಡಿರುವುದದರಿಂದ ಶಿಕ್ಷಣ ಇಲಾಖೆ ಒಂದಿಷ್ಟು ಪಠ್ಯಗಳನ್ನು ಕೈಬಿಡಲು ನಿರ್ಧರಿಸಿದೆ. ಹೀಗಾಗಿ ಟಿಪ್ಪು ಸುಲ್ತಾನ್ರನ್ನು ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದ ಬಿಜೆಪಿ ಕೋವಿಡ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಟಿಪ್ಪು ಸುಲ್ತಾನ್ ಪಠ್ಯವನ್ನು ಕೈಬಿಡುವುದರ ಮೂಲಕ ಶಿಕ್ಷಣವನ್ನು ಕೇಸರಿಕರಣ ಮಾಡಲು ಹೊರಟಿದೆ.
ಬಿಜೆಪಿ ಸರಕಾರ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ಮುಂತಾದ ವಿಷಯಗಳನ್ನು ಒಳಗೊಂಡ ಪಠ್ಯವನ್ನು ಕಡಿತ ಮಾಡುವ ದುರಾಲೋಚನ ಇಟ್ಟುಕೊಂಡಿರುವುದರ ಕುರಿತು ಜನತೆ ಜಾಗೃತಿಗೊಳ್ಳಬೇಕಿದೆ. ಸಂವಿಧಾನದ ರಚನೆಯಲ್ಲಿ ಪಾಲುದಾರರಲ್ಲದ ಹಿಂದುತ್ವ ಪ್ರತಿಪಾದಕರು ನೈಜ ಇತಿಹಾಸವನ್ನು ಮರೆಮಾಚುವ ಮೂಲಕ ಜನ ಸಮುದಾಯವನ್ನು ದಾರಿತಪ್ಪಿಸಲು ಹೊರಟ್ಟಿದ್ದಾರೆಂದು ಅವರು ಪ್ರಕಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.





