ಬೆಂಗಳೂರು: ಭಾರೀ ಡ್ರಗ್ಸ್ ಜಾಲ ಬಯಲಿಗೆಳೆದ ಸಿಸಿಬಿ ಪೊಲೀಸರು
1.25 ಕೋ.ರೂ. ಮೌಲ್ಯದ ಡ್ರಗ್ಸ್ ಸಹಿತ ಕೇರಳ ಮೂಲದ ನಾಲ್ವರ ಬಂಧನ

ಬೆಂಗಳೂರು, ಜು.29: ಮಾದಕ ವಸ್ತುಗಳ ಮಾರಾಟ ದಂಧೆ ಮೇಲೆ ತೀವ್ರ ನಿಗಾ ಇಟ್ಟಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು, ಕೇರಳ ಮೂಲದ ನಾಲ್ವರನ್ನು ಬಂಧಿಸಿ, 1.25 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದು, ತನಿಖಾಧಿಕಾರಿಗಳಿಗೆ ಬಹುಮಾನ ನೀಡಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದರು.
ಬುಧವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇರಳ ಮೂಲದ ಶಹದ್ ಮುಹಮ್ಮದ್, ಅಝ್ಮಲ್, ಅಜಿನ್ ಕೆ.ಜಿ, ವರ್ಗೀಸ್, ನಿತೀನ್ ಮೋಹನ್ ಎಂದು ಗುರುತಿಸಲಾಗಿದ್ದು, ಬಂಧಿತರು ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‍ಗಳಾಗಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದರು.
ಬಂಧಿತರಿಂದ 2000 ಎಲ್‍ಎಸ್‍ಡಿ ಸ್ಟಿಪ್ಸ್, 110 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 10 ಎಕ್ಸ್ಟೇಸಿ ಮಾತ್ರೆಗಳು, 5 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 5 ಮೊಬೈಲ್ ಫೋನ್ ಸೇರಿ ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ ಪ್ರಶಂಸಿಸಿ ಬಸವರಾಜ್ ಬೊಮ್ಮಾಯಿ ಬಹುಮಾನ ಘೋಷಿಸಿದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಪಬ್‍ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್‍ರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‍ಗಳ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ನಗರದ ಸೋಲದೇವನಹಳ್ಳಿ ಪೊಲೀಸ್ ವ್ಯಾಪ್ತಿಯ ಚಿಕ್ಕಬಾಣಾವರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಸದ್ಯ ಪ್ರಮುಖ ಆರೋಪಿ ಧೀರಜ್ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದರು.
ಧೀರಜ್ ಈತ ನೆದರ್‍ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಡ್ರಗ್ಸ್ ತರಿಸಿಕೊಂಡು ನಂತರ ತನ್ನ ಸಹಚರರ ಮೂಲಕ ಡ್ರಗ್ಸ್ ಪಡೆದು ಇಂತವರಿಗೆ ಮಾರಾಟ ಮಾಡಬೇಕು ಎಂದು ಮೆಸೇಜ್ ರವಾನಿಸುತ್ತಿದ್ದನು ಎಂದ ಅವರು, ಕಾಲು ಇಂಚು ಇರುವ ಪೇಪರ್ ಬೆಲೆ ಕಡಿಮೆ ಅಂದರೆ 5 ಸಾವಿರಕ್ಕೆ ಮಾರಾಟ ಹಾಗೂ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.
ಬಂಧಿತರು ಇಲ್ಲಿನ ಡಿಜೆಗಳಲ್ಲಿ ಹೆಚ್ಚಾಗಿ ಎಲ್‍ಎಸ್‍ಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿಯೂ ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






.gif)
.gif)
.gif)

