ಬೆಳ್ತಂಗಡಿ ಶಾಸಕರು ನಡೆಸಿದ ಪೊಲೀಸ್ ಸಭೆಯಲ್ಲಿ ಸಂಘ ಪರಿವಾರದ ಮುಖಂಡರು ಭಾಗಿ !

ಬೆಳ್ತಂಗಡಿ, ಜು.29: ತಾಲೂಕಿನಲ್ಲಿ ಗೋ ಕಳ್ಳತನ, ಅಕ್ರಮ ಗೋಸಾಗಾಟ ತಡೆಯುವ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡೆಸಿದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಂಘ ಪರಿವಾರದ ಮುಖಂಡರು ಭಾಗವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಅಕ್ರಮ ಗೋಸಾಗಾಟದ ಹೆಸರಲ್ಲಿ ಜಾನುವಾರ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಈ ಸಭೆಯಲ್ಲಿ ಭಾಗವಹಿಸಿರುವುದು ಇಂತಹ ಹಲ್ಲೆಗಳು ಇನ್ನಷ್ಟು ನಡೆಯಲು ಕಾರಣವಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಜು.28ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಈ ಸಭೆ ನಡೆದಿದೆ. ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿಗಳು ಹೊರಬರುತ್ತಿಲ್ಲ.
ಸಭೆಯಲ್ಲಿ ಬೆಳ್ತಂಗಡಿ, ಧರ್ಮಸ್ಥಳ, ಪೂಂಜಾಲಕಟ್ಟೆ, ವೇಣೂರು, ಸಬ್ ಇನ್‌ಸ್ಪೆಕ್ಟರ್ ಹಾಗೂ ಸಂಚಾರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಭಾಗವಹಿಸಿದ್ದರು ಎನ್ನಲಾಗಿದೆ.
ಅದೇರೀತಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರುಗಳಾದ ಸುಬ್ರಹ್ಮಣ್ಯ ಅಗರ್ತ, ಮೋಹನ, ನವೀನ್ ನೆರಿಯ, ಭಾಸ್ಕರ ಧರ್ಮಸ್ಥಳ, ಸಂತೋಷ್ ಅತ್ತಾಜೆ, ಶಶಾಂಕ ಭಟ್ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಹಾಗೂ ಬೆಳ್ತಂಗಡಿ ಪೊಲೀಸ್ ಇನ್ ಸ್ಪೆಕ್ಟರ್ ಅವರನ್ನು 'ವಾರ್ತಾಭಾರತಿ' ಸಂಪರ್ಕಿಸಿದ್ದು, ಅವರ ಪ್ರತಿಕ್ರಿಯೆ ಬಂದ ತಕ್ಷಣ ಸುದ್ದಿಯನ್ನು ಅಪ್ಡೇಟ್ ಮಾಡಲಾಗುವುದು.







