ಭಟ್ಕಳದ ಅಂಜುಮನ್ ಪಿಯು ಕಾಲೇಜಿನಲ್ಲಿ ಮೊದಲ ಬಾರಿ ಸಿಇಟಿ ಪರೀಕ್ಷೆ; 253 ವಿದ್ಯಾರ್ಥಿಗಳು ನೋಂದಣಿ

ಭಟ್ಕಳ, ಜು.29: ರಾಜ್ಯಾದ್ಯಂತ ಪ್ರಸಕ್ತ ಸಾಲಿನ ಸಿಟಿಟಿ ಪರೀಕ್ಷೆ ಜು.30, 31ರಂದು ನಡೆಯಲಿದ್ದು, ಭಟ್ಕಳದಲ್ಲಿ ಪ್ರಥಮ ಬಾರಿಗೆ 253 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅಂಜುಮನ್ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ಸಿಇಟಿ ಕೇಂದ್ರದ ಮುಖ್ಯಸ್ಥ ಮುಹಮ್ಮದ್ ಯೂಸುಫ್ ಕೋಲಾ ತಿಳಿಸಿದ್ದಾರೆ.
ಮೊದಲ ಬಾರಿಗೆ ಭಟ್ಕಳದ ಅಂಜುಮಾನ್ ಪಿಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ತಾಲೂಕಿನ ಒಟ್ಟು 253 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದವರು ಮಾಹಿತಿ ನೀಡಿದರು.
ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ತಪಾಸಣೆ ಸ್ಕ್ರೀನಿಂಗ್ ಮಾಡಬೇಕಾಗಿರುವುದರಿಂದ ಪರೀಕ್ಷಾರ್ಥಿಗಳು ಪರೀಕ್ಷೆ ನಡೆಯುವುದಕ್ಕಿಂತ ಎರಡು ಗಂಟೆಗಳ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು ಎಂದು ಅವರು ತಿಳಿಸಿದರು. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿದ್ದು ಫೇಸ್ ಮಾಸ್ಕ್ ಧರಿಸಬೇಕು, ಕುಡಿಯುವ ನೀರನ್ನು ಮನೆಯಿಂದ ತರಬೇಕು ಎಂದು ಅವರು ಹೇಳಿದರು.
ರೋಗಲಕ್ಷಣಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿದೆ. ಹಿರಿಯ ಅಧಿಕಾರಿಗಳನ್ನು ವೀಕ್ಷಕರಾಗಿ ನಿಯೋಜಿಸಲಾಗಿದೆ. ಮತ್ತು ಸಿಇಟಿಯನ್ನು ಸುಗಮವಾಗಿ ನಡೆಸಲು ಸಮಿತಿಗಳನ್ನು ರಚಿಸಲಾಗಿದೆ. ಪರೀಕ್ಷೆಯಲ್ಲಿನ ನಕಲು ತಡೆಗಟ್ಟಲು ಪ್ರತಿ ಕೇಂದ್ರಕ್ಕೆ ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ಅನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







