ಜಿಲ್ಲಾ ನ್ಯಾಯಮೂರ್ತಿ, ಪುತ್ರನ ನಿಗೂಢ ಸಾವು: ಮಹಿಳೆ ಸಹಿತ ಆರು ಮಂದಿಯ ಬಂಧನ

ಬೇತುಲ್, ಜು. 29: ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಧೀಶ ಮಹೇಂದ್ರ ತ್ರಿಪಾಠಿ ಹಾಗೂ ಅವರ 30 ವರ್ಷದ ಪುತ್ರ ಅಭಿನಯ್ ರಾಜ್ ತ್ರಿಪಾಠಿಯ ನಿಗೂಢ ಸಾವಿಗೆ ಸಂಬಂಧಿಸಿ ಓರ್ವ ಮಹಿಳೆ, ಮಂತ್ರವಾದಿ ಸಹಿತ 6 ಮಂದಿಯನ್ನು ಬೇತುಲ್ ಪೊಲೀಸರು ಬಂಧಿಸಿದ್ದಾರೆ. ಎಡಿಜೆ ಕುಟುಂಬಕ್ಕೆ ಛಿದ್ವಾರದ ನಿವಾಸಿ ಮಹಿಳೆ ವಿಷ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ.
ಆಕೆಯ ವಿರುದ್ಧ ಶೀಘ್ರ ಹತ್ಯೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಹೇಂದ್ರ ತ್ರಿಪಾಠಿ ಅವರಿಗೆ ಮಹಿಳೆ ಜುಲೈ 20ರಂದು ಒಂದು ಚೀಲ ಹಿಟ್ಟು ನೀಡಿದ್ದಳು. ಅದನ್ನು ತ್ರಿಪಾಠಿ ಅವರು ಮನೆಗೆ ತಂದಿದ್ದರು. ಅವರ ಪತ್ನಿ ಅದೇ ಆ ಹಿಟ್ಟಿನಿಂದ ಆಹಾರ ತಯಾರಿಸಿದ್ದರು. ಅದೇ ದಿನ ರಾತ್ರಿ ತ್ರಿಪಾಠಿ ಹಾಗೂ ಅವರ ಇಬ್ಬರು ಪುತ್ರರು ವಾಂತಿ ಮಾಡಲು ಆರಂಭಿಸಿದ್ದರು. ಜುಲೈ 23ರಂದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಬಳಿಕ ಜುಲೈ 25ರಂದು ಅವರನ್ನು ನಾಗಪುರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ತ್ರಿಪಾಠಿ ಹಾಗೂ ಓರ್ವ ಪುತ್ರ ಅಭಿನಯ್ ರಾಜ್ ಮೃತಪಟ್ಟಿದ್ದರು ಎಂದು ಪ್ರಾಣಾಪಾಯದಿಂದ ಪಾರಾದ ಪತ್ನಿ ಹಾಗೂ ಪುತ್ರನ ಹೇಳಿಕೆ ತಿಳಿಸಿದೆ.
ಮಹಿಳೆ, ಆಕೆಯ ವಾಹನ ಚಾಲಕ, ಮಾಂತ್ರಿಕ ಹಾಗೂ ಇತರ ಮೂವರನ್ನು ಮೊಬೈಲ್ ನೆಲೆಯ ಆಧಾರದಲ್ಲಿ ಪತ್ತೆ ಹಚ್ಚಿ ಅನಂತರ ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.





