ಕೋವಿಡ್‌ಗೆ ಉಡುಪಿಯಲ್ಲಿ ಮತ್ತೆ ಮೂರು ಸಾವು

ಉಡುಪಿ, ಜು.29: ಜಿಲ್ಲೆಯಲ್ಲಿ ಇಂದು ಮತ್ತೆ ಮೂವರು ಕೋವಿಡ್-19 ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇದರೊಂದಿಗೆ ಉಡುಪಿಯ ಒಬ್ಬರು ಪತ್ರಕರ್ತರಲ್ಲೂ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಕಾರ್ಕಳದ 72ರ ಹರೆಯದ ವೃದ್ಧರೊಬ್ಬರು ಇಂದು ಮಣಿಪಾಲದ ಕೆಎಂಸಿಯಲ್ಲಿ ಮೃತಪಟ್ಟಿದ್ದು, ಅವರು ಬಹುಅಂಗಗಳ ವೈಫಲ್ಯಕ್ಕಾಗಿ ಚಿಕಿತ್ಸೆಯಲ್ಲಿದ್ದು, ಕೊರೋನ ಸೋಂಕಿಗೆ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಆಗಿದ್ದರು ಎಂದು ತಿಳಿದುಬಂದಿದೆ.
ಅಲ್ಲದೇ ಕುಂದಾಪುರ ತಾಲೂಕು ಅಜ್ರಿಯ 70ವರ್ಷದ ವೃದ್ಧರೊಬ್ಬರು ಇಂದು ಕೋವಿಡ್ ಪಾಸಿಟಿವ್‌ನೊಂದಿಗೆ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತಿದ್ದರೆಂದು ತಿಳಿದುಬಂದಿದೆ. ಅಲ್ಲದೇ ಬಿದ್ಕಲ್‌ಕಟ್ಟೆ ಸಮೀಪದ ಜಪ್ತಿಯ 73 ವರ್ಷ ಪ್ರಾಯದ ವೃದ್ಧೆಯೊಬ್ಬರು ಇಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆಯಲ್ಲಿರುವಂತೆ ಮೃತಪಟ್ಟಿದ್ದಾರೆ. ಅವರಲ್ಲೂ ಕೊರೋನ ಪಾಸಿಟಿವ್ ಕಂಡುಬಂದಿತ್ತು.
ಕುಂದಾಪುರ ತಾಲೂಕು ಮರವಂತೆ ಪಿಎಚ್‌ಸಿ ವ್ಯಾಪ್ತಿಯ 72ರ ಹರೆಯದ ವೃದ್ಧರೊಬ್ಬರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಅವರಲ್ಲೂ ಸೋಂಕು ಪತ್ತೆಯಾಗಿತ್ತು. ಕಳೆದ ಸೋಮವಾರ ರಾತ್ರಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ 62 ವರ್ಷ ಪ್ರಾಯದ ಉಡುಪಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉಡುಪಿ, ಮಣಿಪಾಲಗಳಲ್ಲಿ ಐಸಿಯು ಲಭ್ಯವಿಲ್ಲದ ಕಾರಣ ಇವರನ್ನು ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 28 ಮಂದಿ ಕೊರೊನ ಸೋಂಕಿನಿಂದ ಮೃತ ಪಟ್ಟಿರುವ ಮಾಹಿತಿ ಇದೆ. ಅಲ್ಲದೇ ಇಂದು ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆಯಲ್ಲಿದ್ದ ಉತ್ತರ ಕನ್ನಡದ ಅಂಕೋಲ ಹಾಗೂ ಚಿತ್ರದುರ್ಗದ ಇಬ್ಬರು ಹಿರಿಯ ನಾಗರಿಕರು ಕೋವಿಡ್ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ ಎಂದೂ ತಿಳಿದುಬಂದಿದೆ.







