ಪಠ್ಯಪುಸ್ತಕದಿಂದ ಅಬ್ಬಕ್ಕ ಇತಿಹಾಸವನ್ನು ಕೈಬಿಡದಂತೆ ಎಸ್‌ಐಒ ಆಗ್ರಹ
ಮಂಗಳೂರು, ಜು.29: ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್)ಯು ದ.ಕ. ಜಿಲ್ಲೆಯ ಇತಿಹಾಸದ ಪ್ರಮುಖ ಭಾಗವಾದ ಉಳ್ಳಾಲದ ರಾಣಿ ಅಬ್ಬಕ್ಕ ಸೇರಿದಂತೆ ಮೈಸೂರಿನ ಹುಲಿ ಎಂದು ಕರೆಯಲ್ಪಡುವ ಟಿಪ್ಪುಸುಲ್ತಾನ್‌ರ ಇತಿಹಾಸವನ್ನು ಕೊರೋನ ನೆಪದಲ್ಲಿ ಪಠ್ಯಪುಸ್ತಕದಿಂದ ತೆಗೆದು ಹಾಕಿರುವುದು ಖಂಡನೀಯ. ರಾಜ್ಯ ಸರಕಾರವು ತಕ್ಷಣ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ದ.ಕ. ಜಿಲ್ಲಾ ಘಟಕ ಆಗ್ರಹಿಸಿದೆ.
2020-21ರ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಅಂದಾಜು ಮಾಡಿ, ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಹಲವು ಐತಿಹಾಸಿಕ ಘಟನೆಗಳನ್ನು ಕೈಬಿಟ್ಟಿದೆ. ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್)ಯು ಇದಕ್ಕೆ ಸಮಯದ ಕೊರತೆಯ ನೆಪವೊಡ್ಡಲಾಗಿದೆ. ಸೆಪ್ಟೆಂಬರ್ 1ರಿಂದ 120 ದಿನಗಳಲ್ಲಿ ಅಗತ್ಯವಾದ ಪಠ್ಯದ ಭಾಗಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಕೆಟಿಬಿಎಸ್ 6 ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನದ ಶಿಕ್ಷಕರಿಗೆ ಕೈಪಿಡಿಯನ್ನು ಬಿಡುಗಡೆಗೊಳಿಸಿದೆ.
ಧರ್ಮಗಳು, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ತುಳುನಾಡಿನ ಜಾನಪದ ಮತ್ತಿತರ ಹೆಚ್ಚು ಪ್ರಮುಖ ವಿಷಯಗಳತ್ತ ಶಿಕ್ಷಕರು ಗಮನ ಹರಿಸಬೇಕಾಗಿದೆ. ಅದಕ್ಕಾಗಿ ಟಿಪ್ಪುಸಹಿತ ರಾಣಿ ಅಬ್ಬಕ್ಕರ ಅಧ್ಯಾಯವನ್ನು ಮೊಟಕುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಪೋರ್ಚುಗೀಸರೊಂದಿಗೆ ಹೋರಾಡಿದ ರಾಣಿ ಅಬ್ಬಕ್ಕ ಕುರಿತ ಅಧ್ಯಾಯ ತೆಗೆದಿದ್ದರಿಂದ ತುಳುನಾಡಿನ ಇತಿಹಾಸದ ಪ್ರಮುಖ ಭಾಗವನ್ನು ಕಲಿಯುವುದರಿಂದ ವಿದ್ಯಾರ್ಥಿಗಳು ವಂಚಿತರಾಗಲಿದ್ದಾರೆ. ಆದ್ದರಿಂದ ಈ ತೀರ್ಮಾನವನ್ನು ರಾಜ್ಯ ಸರಕಾರವು ಮರು ಪರಿಶೀಲಿಸಬೇಕು ಎಂದು ಎಸ್‌ಐಒ ದ.ಕ.ಜಿಲ್ಲಾಧ್ಯಕ್ಷ ಅಶೀರುದ್ದೀನ್ ಮಂಜನಾಡಿ ಆಗ್ರಹಿಸಿದ್ದಾರೆ.







