ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾನಕ್ಕೆ ಅವಕಾಶವಿಲ್ಲ: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್

ಬೆಂಗಳೂರು, ಜು.29: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಈ ಬಾರಿಯ ಗಣೇಶ ಮೂರ್ತಿಯನ್ನು ಗಲ್ಲಿ ಗಲ್ಲಿಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ಗಣೇಶ ಕೂರಿಸಲು ಅನುಮತಿ ನೀಡದಿರಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿ ನಿರ್ಧಾರ ಮಾಡಿವೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಇಡೀ ವಿಶ್ವವೇ ಕೊರೋನದಿಂದ ನಲುಗುತ್ತಿದೆ. ಇಂತಹ ಸಮಯದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲಾ ಹಬ್ಬಗಳ ಆಚರಣೆ ಆಗಬೇಕು. ಅದ್ದರಿಂದ ನಿಯಮವನ್ನೂ ಮೀರಬಾರದು. ಕೊರೋನ ಆತಂಕದಿಂದ ಜನ ಕೂಡಾ ಸೇರಲ್ಲ, ಎಲ್ಲರೂ ಅವರವರ ಮನೆಯಲ್ಲಿ ಆಚರಣೆ ಮಾಡಿದರೆ ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.
ನಗರದ ಹೆಚ್ಚಿನ ವಾರ್ಡ್ ಸೀಲ್‍ಡೌನ್ ಹಾಗೂ ಕಂಟೈನ್ಮೆಂಟ್ ಝೋನ್ ಆಗಿರುವುದರಿಂದ ರಸ್ತೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಮತ್ತಷ್ಟು ಸೋಂಕು ಹರಡುವ ಸಾಧ್ಯತೆಯಿದೆ. ಅಲ್ಲದೇ ಈ ವೇಳೆ ಸುರಕ್ಷಿತ ಅಂತರ ಕಾಪಾಡುವುದು ಕಷ್ಟ ಸಾಧ್ಯವಾಗಿರುವುದರಿಂದ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.





