‘50 ಕೊಲೆಗಳ ನಂತರ ಲೆಕ್ಕ ಮಾಡುವುದು ಕಷ್ಟವಾಯಿತು’: ಸರಣಿ ಹಂತಕ ಆಯುರ್ವೇದ ವೈದ್ಯನ ಬಂಧನ

ಹೊಸದಿಲ್ಲಿ: ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳ 50ಕ್ಕೂ ಹೆಚ್ಚು ಜನರನ್ನು ಕೊಲೆಗೈದ ಆರೋಪದಲ್ಲಿ ಆಯುರ್ವೇದ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿಯಿಂದ ಆತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ 100ಕ್ಕೂ ಹೆಚ್ಚು ಜನರನ್ನು ಕೊಲೆಗೈದಿರಬಹುದು ಎಂದು ಪೊಲೀಸರು ತಿಳಿಸಿದ್ದು, ಸರಿಯಾದ ಸಂಖ್ಯೆ ಇನ್ನಷ್ಟೇ ತಿಳಿದುಬರಬೇಕಿದೆ. ಏಕೆಂದರೆ ಈತನ ವಿರುದ್ಧ ದಿಲ್ಲಿ, ಉತ್ತರ ಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಯಬೇಕಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ 62 ವರ್ಷದ ದೇವೇಂದರ್ ಶರ್ಮಾ ಉತ್ತರ ಪ್ರದೇಶದ ಆಲಿಘರ್ ನಿವಾಸಿಯಾಗಿದ್ದು, ಹಲವು ಅಪಹರಣ ಮತ್ತು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಕಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದದ್ದಕ್ಕಾಗಿ ಬಂಧಿಸಲಾಗಿತ್ತು ಹಾಗು ಕಿಡ್ನಿ ದಂಧೆ ಪ್ರಕರಣದಲ್ಲಿ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದ.
“”ಜೈಪುರದ ಸೆಂಟ್ರಲ್ ಜೈಲಿನಲ್ಲಿ ಆತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಜನವರಿಯಲ್ಲಿ ಆತ 20 ದಿನಗಳ ಪರೋಲ್ ನಲ್ಲಿ ಬಿಡುಗಡೆಗೊಂಡಿದ್ದ. ಆದರೆ ನಂತರ ಆತ ತಪ್ಪಿಸಿಕೊಂಡಿದ್ದ” ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಮಂಗಳವಾರ ಆತನ ವಿಚಾರಣೆ ನಡೆಸಿದ್ದು, ಆತ ಶಾಂತ ರೀತಿಯಲ್ಲಿದ್ದ ಮತ್ತು ಸಹಕರಿಸಿದ್ದಾನೆ. 50ಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ತನ್ನ ಕೈವಾಡವಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. 50 ಕೊಲೆಗಳ ನಂತರ ತನಗೆ ಲೆಕ್ಕವಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆತ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







