ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರಿಯಲ್ ಎಸ್ಟೇಟ್ ಮಾಫಿಯಾದ 13,814 ಪ್ರಕರಣ ವಜಾ: ಸಿದ್ದರಾಮಯ್ಯ ಆರೋಪ

ಮೈಸೂರು, ಜು.30: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಅಂಗೀಕಾರಗೊಳಿಸಿರುವುದರಿಂದ ರಿಯಲ್ ಎಸ್ಟೇಟ್ ಮಾಫಿಯಾದವರ 13,814 ಪ್ರಕರಣಗಳು ಮನ್ನಾ ಆಗಲಿದ್ದು, ಈ ಸಂಬಂಧ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರದ ಒಂದ ವರ್ಷದ ಸಾಧನೆಯನ್ನು ಪತ್ರಿಕೆಗಳು, ಟಿ.ವಿ ಗಳಿಗೆ ಕೋಟಿಗಟ್ಟಲೆ ಜಾಹಿರಾತು ನೀಡುವ ಮೂಲಕ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕೊರೋನ ಸಂಕಷ್ಟದ ಸಮಯದಲ್ಲಿ ಯಾವ ಸಾಧನೆ ಮಾಡಿದ್ದೇನೆ ಎಂದು ಆಚರಿಸಿಕೊಂಡಿದ್ದಾರೊ ಗೊತ್ತಿಲ್ಲ. ಕೊರೋನ ಸಂದರ್ಭವನ್ನು ಬಳಸಿಕೊಂಡು ರೈತ, ಕಾರ್ಮಿಕ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಮಾತ್ರ ಜಾರಿಗೆ ತರುವ ಮೂಲಕ ಶ್ರೀಮಂತರ ಹಿತವನ್ನು ಕಾಪಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಎಪಿಎಂಸಿ ಕಾಯ್ದೆ, ಅಗತ್ಯ ಖರೀದಿ ಕಾಯ್ದೆ, ಕಾರ್ಮಿಕ ಕಾಯ್ದೆ ಮತ್ತು ಭೂ ಸುಧಾರಾಣಾ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತರುವ ಮೂಲಕ ಉಳ್ಳವರು, ರಿಯಲ್ ಎಸ್ಟೇಟ್ ಮಾಫಿಯಾದವರ, ಶ್ರೀಮಂತರ ಹಿತಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವರಾಜ ಅರಸು ಅವರು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂಮಿ ಒಡೆಯ ಎಂದಿದ್ದರು. ಆದರೆ ಯಡಿಯೂರಪ್ಪ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಉಳ್ಳವನೇ ಭೂಮಿ ಒಡೆಯ ಎಂಬಂತೆ ಮಾಡಿದ್ದಾರೆ. ರಾಜ್ಯಾದ್ಯಂತ ರೈತರ ಬೆಲೆಬಾಳುವ ಲಕ್ಷಾಂತರ ಭೂಮಿಯನ್ನು ವಶಪಡಿಸಿಕೊಂಡಿರುವ ರಿಯಲ್ ಎಸ್ಟೇಟ್ ಮಾಫಿಯಾದವರ ವಿರುದ್ಧ ಕೋರ್ಟ್ ನಲ್ಲಿ ದಾಖಲಾಗಿರುವ 13,814 ಪ್ರಕರಣದ ಕೇಸ್ ಗಳು ನಡೆಯುತ್ತಿದ್ದವು. ಬೆಂಗಳೂರು ಗ್ರಾಮಾಂತರದಲ್ಲಿ 1,800 ಬೆಂಗಳೂರು ನಗರದಲ್ಲಿ 1080, ಮೈಸೂರಿನಲ್ಲಿ 996 ಕೇಸ್ ಸೇರಿದಂತೆ ರಾಜ್ಯದ ಇತರೆಡೆ ಸೇರಿದಂತೆ ಒಟ್ಟು 13,814 ಕೇಸ್ ನಡೆಯುತ್ತಿದೆ. ಭೂಸುಧಾರಣೆ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ತಂದಿದ್ದರಿಂದ ಇಷ್ಟೂ ಪ್ರಕರಣಗಳು ಅಂತ್ಯಗೊಳ್ಳಲಿವೆ. ಹಾಗಾಗಿ ಈ ಸಂಬಂಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದರು.
ಕೊರೋನ ಸಂಕಷ್ಟದಲ್ಲಿ ರಾಜ್ಯ ಮತ್ತು ದೇಶದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಲಕ್ಷಾಂತರ ಮಂದಿ ಕೊರೋನ ಸೋಂಕಿನಿಂದ ಬಳಲುತ್ತಿದ್ದಾರೆ. ಇಂತಹ ಸಮಯದಲ್ಲಿ ಯಡಿಯೂರಪ್ಪ ಸೂತಕದ ಮನೆಯಲ್ಲಿ ಒಂದು ವರ್ಷದ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.







