ಸಿಇಟಿ: ಎರಡು ಪರೀಕ್ಷೆಗೆ 2089 ಮಂದಿ ಗೈರು
ಕೋವಿಡ್ ಪಾಸಿಟಿವ್ ಐವರು ಹಾಜರು
ಉಡುಪಿ, ಜು.30: ಈ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಇಂದು ಉಡುಪಿ ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ, ಅಕ್ರಮಗಳಿಲ್ಲದೇ ಸುಗಮವಾಗಿ ನಡೆದಿದ್ದು, ಮೊದಲ ದಿನದ ಎರಡು ಪರೀಕ್ಷೆಗಳಿಗೆ ಒಟ್ಟು 2089 ಮಂದಿ ಗೈರುಹಾಜರಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.
ಉಡುಪಿಯ ಐದು, ಕುಂದಾಪುರದ ಮೂರು ಹಾಗೂ ಕಾರ್ಕಳದ ಎರಡು ಕೇಂದ್ರಗಳಲ್ಲಿ ಬೆಳಗ್ಗೆ ನಡೆದ ಜೀವಶಾಸ್ತ್ರ ಪರೀಕ್ಷೆಗೆ 1628 ಮಂದಿ ಹಾಗೂ ಅಪರಾಹ್ನ ನಡೆದ ಗಣಿತ ಪರೀಕ್ಷೆಗೆ 461 ಮಂದಿ ಗೈರುಹಾಜರಾಗಿದ್ದಾರೆ. ಜೀವಶಾಸ್ತ್ರ ಪರೀಕ್ಷೆಗೆ ನೊಂದಾಯಿತ ಒಟ್ಟು 3905 ವಿದ್ಯಾರ್ಥಿಗಳಲ್ಲಿ 2277 ಮಂದಿ ಪರೀಕ್ಷೆಗೆ ಹಾಜರಾದರೆ, ಗಣಿತ ಪರೀಕ್ಷೆಗೆ 3905ರಲ್ಲಿ 3444 ಮಂದಿ ಪರೀಕ್ಷೆ ಬರೆದಿದ್ದಾರೆ ಎಂದವರು ತಿಳಿಸಿದರು.
ಪಾಸಿಟಿವ್ ಬಂದ ಐವರು ಹಾಜರು: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೋವಿಡ್-19ಕ್ಕೆ ಪಾಸಿಟಿವ್ ಬಂದ ಒಟ್ಟು ಐವರು ವಿದ್ಯಾರ್ಥಿಗಳು ಇಂದು ಉಡುಪಿ ಬನ್ನಂಜೆಯ ಸಮಾಜ ಕಲ್ಯಾಣ ಬಾಲಕಿಯರ ವಸತಿ ನಿಲಯ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ ಇಬ್ಬರು ಬಾಲಕರು ಹಾಗೂ ಮೂವರು ಬಾಲಕಿಯರು. ಕುಂದಾಪುರದ ಮೂವರು, ಕಾಪು ಮತ್ತು ಉಡುಪಿಯ ತಲಾ ಒಬ್ಬರು ಇಂದು ಉಡುಪಿ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ.
ಗಣಿತ ಪರೀಕ್ಷೆಯನ್ನು ಐವರೂ ಬರೆದರೆ, ಜೀವಶಾಸ್ತ್ರ ಪರೀಕ್ಷೆಗೆ ಒಬ್ಬ ಬಾಲಕ ಗೈರುಹಾಜರಾಗಿದ್ದ ಎಂದು ಕಟ್ಟಿಮನಿ ನುಡಿದರು.







