ಸಿಂಧೂ ರೂಪೇಶ್ ವರ್ಗಾವಣೆ ಪ್ರಜಾಪ್ರಭುತ್ವದ ಕಗ್ಗೊಲೆ: ಕಾರ್ಪೊರೇಟರ್ ಝೀನತ್

ಝೀನತ್ ಶಂಶುದ್ದೀನ್
ಮಂಗಳೂರು, ಜು.30: ನಿಷ್ಠಾವಂತ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ರೂಪೇಶ್ ಅವರ ವರ್ಗಾವಣೆ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆ ಹಾಗೂ ಮಹಿಳಾ ವರ್ಗಕ್ಕೆ ಮಾಡಿದ ಅವಮಾನವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಝೀನತ್ ಶಂಶುದ್ದೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಆರಂಭದ ಸಂದರ್ಭ ರಾಜಕೀಯ, ಧಾರ್ಮಿಕ ಹಾಗೂ ಇನ್ನಿತರ ಎಲ್ಲ ವರ್ಗದ ಜನರೊಂದಿಗೆ ಬೆರೆತು ತೆಗೆದುಕೊಂಡ ತೀರ್ಮಾನಗಳು ನಿಜವಾಗಿಯೂ ಬುದ್ಧಿವಂತರ ಜಿಲ್ಲೆಯ ಜನತೆ ಮೆಚ್ಚಲೇಬೇಕಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೌದಿ ಅರೇಬಿಯದಿಂದ ಮಂಗಳೂರಿಗೆ ತಲುಪಿದ ಅದೆಷ್ಟೋ ಗರ್ಭಿಣಿಯರು ಆಹಾರವಿಲ್ಲದೆ ಕಷ್ಟಪಟ್ಟಿದ್ದರು. ಇದನ್ನು ಅರಿತ ಕೂಡಲೇ ಸಿಂಧೂ ರೂಪೇಶ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿದ್ದಂತಹ ಎಲ್ಲ ಲೋಪದೋಷ ಸರಿಪಡಿಸಿರುವುದನ್ನು ಮರೆಯುಂತಿಲ್ಲ ಎಂದಿದ್ದಾರೆ.
ನಿಷ್ಠಾವಂತ ಡಿಸಿ ಸಸಿಕಾಂತ್ ಸೆಂಥಿಲ್ ಬಳಿಕ ಜಿಲ್ಲಾಧಿಕಾರಿ ಸ್ಥಾನ ತುಂಬಲು ಬಂದವರು ಸಿಂಧೂ ರೂಪೇಶ್ ಕುಮಾರ್. ಪ್ರಾರಂಭದಲ್ಲಿ ಅದೆಷ್ಟೋ ಒತ್ತಡಗಳು ಇದ್ದರೂ ಯಾವುದಕ್ಕೂ ಮಣಿಯದೆ ನಿಷ್ಠಾವಂತ ಡಿಸಿಯಾಗಿ ಕಾರ್ಯ ನಿರ್ವಹಿಸಿರುವುದು ಗಮನಾರ್ಹವಾದುದು ಎಂದು ತಿಳಿಸಿದರು.







