ಮುಡಿಪು: ಕೊರೋನ ತಡೆ ಅರಿವು, ಔಷಧಿ ವಿತರಣೆ ಅಭಿಯಾನಕ್ಕೆ ಜಿಪಂ ಸಿಇಒ ಚಾಲನೆ

ಮುಡಿಪು, ಜು.30: ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ 2ನೇ ಹಂತದ ಕೊರೋನ ತಡೆ ಜಾಗೃತಿ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧ ವಿತರಣಾ ಅಭಿಯಾನಕ್ಕೆ ಜಿಪಂ ಸಿಇಒ ಡಾ. ಸೆಲ್ವಮಣಿ ಗುರುವಾರ ಚಾಲನೆ ನೀಡಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಆಸ್ಪತ್ರೆ, ಆಯುಷ್ ಇಲಾಖೆ, ಜನ ಶಿಕ್ಷಣ ಟ್ರಸ್ಟ್, ಗ್ರಾಪಂ, ಸೆಲ್ಕೋ ಫೌಂಡೇಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಜನ ಶಿಕ್ಷಣ ಟ್ರಸ್ಟ್ ಸೇವಾ ಕೇಂದ್ರ ಮುಡಿಪು, ಶ್ರೀ ವೈದ್ಯನಾಥ ಸಭಾಭವನ ಕಣಂತೂರು, ಅಂಬೇಡ್ಕರ್ ಭವನ ಹೂಹಾಕುವಕಲ್ಲು, ಮುದುಂಗಾರು ಕಟ್ಟೆ, ಮೂಳೂರು ಶಾಲಾ ವಠಾರದಲ್ಲಿ ನಡೆದ ಆರೋಗ್ಯ ಅರಿವು ಅಭಿಯಾನ ಮತ್ತು ಔಷಧಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಸೆಲ್ವಮಣಿ ಗ್ರಾಮೀಣ ಭಾಗದಲ್ಲಿ ನಡೆಯುವ ಈ ಆರೋಗ್ಯ ಅರಿವು ಅಭಿಯಾನ, ಔಷಧಿ ವಿತರಣಾ ಕಾರ್ಯಕ್ರಮ ಜಿಲ್ಲೆಗೆ ಮಾದರಿಯಾಗಿದೆ. ಸ್ಥಳೀಯಾಡಳಿತ, ಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಸ್ವಚ್ಛತೆ, ಸೋಲಾರ್, ನರೇಗಾ, ಜಲ ಸಂರಕ್ಷಣೆ ಕಾರ್ಯಗಳ ಮೂಲಕ ಬಡವರ ಜೀವನಾಧಾರ ಸಂಪನ್ಮೂಲಗಳನ್ನು ವೃದ್ಧಿಸಿ ಸುಸ್ಥಿರ ಅಭಿವೃಧ್ಧಿ ಗುರಿ ಸಾಧನೆಗೆ ಪೂರಕವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಡಾ. ಸಾಜನ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನಶೆಟ್ಟಿ, ಪಿಡಿಒ ಸುನೀಲ್ ಕುಮಾರ್ ಕೊರೋನ ತಡೆ ಜಾಗೃತಿ, ಆಯುಷ್ ಆರೋಗ್ಯ ಅರಿವು ಮತ್ತು ಗ್ರಾಪಂ ಕಾರ್ಯಪಡೆ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಉದ್ಯಮಿ ರಮೇಶ ಶೇಣವ, ತಾಪಂ ಸದಸ್ಯ ಹೈದರ್ ಕೈರಂಗಳ, ಸೆಲ್ಕೋದ ರವೀನಾ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಆಳ್ವ, ಮಾಜಿ ಸದಸ್ಯ ಜನಾರ್ದನ ಕುಲಾಲ್, ಮೆಡಿಕಲ್ ಕಾಲೇಜಿನ ಡಾ. ಕಶ್ಯಪ್, ಡಾ. ಕೌಶಿಕ್ ಮತ್ತಿತರರು ಪಾಲ್ಗೊಂಡಿದ್ದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.







