ಎಸ್‌ಐಒ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ತರಕಾರಿ ಬೀಜಗಳ ವಿತರಣೆ

ಮಂಗಳೂರು, ಜು.30: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದ ದ.ಕ. ಜಿಲ್ಲಾ ಘಟಕವು ಆಯೋಜಿಸಿರುವ ‘ಹಸಿರು ಕರಾವಳಿ’ ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿ ‘ಮಕ್ಕಳ ತೋಟ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಎಸ್‌ಐಒ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ಕೊರೋನ ಹಿನ್ನೆಲೆಯಲ್ಲಿ ಮಕ್ಕಳು ಮನೆಯಲ್ಲಿರುವುದರಿಂದ ಹಾಗು ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ವಿದ್ಯಾರ್ಥಿಗಳಿಗೆ ಉಚಿತ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್‌ನ ಸದಸ್ಯ ಅಬ್ದುಲ್ ಕರೀಂ ಬೆಂಗ್ರೆ ಕಸ್ಬಾ ‘ಮಕ್ಕಳು ಪರಿಸರದ ಬಗ್ಗೆ ಕಾಳಜಿ ಉಳ್ಳವರಾಗಬೇಕು ಮತ್ತು ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸಬೇಕು ಎಂದು ಹೇಳಿದರು.
ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕ ಅಬ್ದುಲ್ ಖಾದರ್ ಕುಕ್ಕಿಲ ಮಕ್ಕಳಿಗೆ ಉಚಿತ ಬೀಜಗಳನ್ನು ವಿತರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. ಎಸ್‌ಐಒ ಜಿಲ್ಲಾಧ್ಯಕ್ಷ ಅಶೀರುದ್ದೀನ್ ಅಲಿಯಾ ಮಂಜನಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್‌ಐಒ ಪಕ್ಕಲಡ್ಕ ಅಧ್ಯಕ್ಷ ಝಮೀರ್ ಕಾರ್ಯಕ್ರಮ ನಿರೂಪಿಸಿದರು. ನಿಹಾಲ್ ಕುದ್ರೋಳಿ ವಂದಿಸಿದರು.





