ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಸ್ಪೀಕರ್, 6 ಬಿಎಸ್ಪಿ ಶಾಸಕರಿಗೆ ಹೈಕೋರ್ಟ್ ನೋಟಿಸು

ಹೊಸದಿಲ್ಲಿ, ಜು. 30: ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ ಅನಂತರ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರಗೊಂಡ 6 ಶಾಸಕರು ಹಾಗೂ ಸ್ವೀಕರ್‌ಗೆ ರಾಜಸ್ಥಾನ ಉಚ್ಚ ನ್ಯಾಯಾಲಯ ಗುರುವಾರ ನೋಟಿಸು ಜಾರಿ ಮಾಡಿದೆ.
ಆಡಳಿತಾರೂಢ ಕಾಂಗ್ರೆಸ್ ಜೊತೆ ಬಿಎಸ್ಪಿ ಶಾಸಕರು ವಿಲೀನಗೊಂಡಿರುವುದನ್ನು ಪ್ರಶ್ನಿಸಿ ಬಿಎಸ್ಪಿ ಹಾಗೂ ಬಿಜೆಪಿ ಶಾಸಕ ಮದನ್ ದಿಲಾವರ್ ಅವರು ರಾಜಸ್ಥಾನ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಅರ್ಜಿಗೆ ಆಗಸ್ಟ್ 11ರಂದು ವಿಚಾರಣೆ ಸಂದರ್ಭ ಪ್ರತಿಕ್ರಿಯೆ ನೀಡುವಂತೆ ಸ್ಪೀಕರ್ ಹಾಗೂ 6 ಶಾಸಕರಿಗೆ ನ್ಯಾಯಾಲಯ ಸೂಚಿಸಿದೆ. ‘‘ವಿಧಾನಸಭೆಯ ಸ್ಪೀಕರ್, ಕಾರ್ಯದರ್ಶಿ ಹಾಗೂ 6 ಶಾಸಕರಿಗೆ ನೋಟಿಸು ಜಾರಿ ಮಾಡಲಾಗಿದೆ. ಆಗಸ್ಟ್ 11ರಂದು ಅವರು ಪ್ರತಿಕ್ರಿಯೆ ಸಲ್ಲಿಸಬೇಕು’’ ಎಂದು ದಿಲ್ವಾರ ಅವರ ವಕೀಲ ತಿಳಿಸಿದ್ದಾರೆ.
ಬಿಎಸ್ಪಿ ಶಾಸಕರು ಕಾಂಗ್ರೆಸ್ ಸೇರಿರುವುದರ ವಿರುದ್ಧ ಮಾರ್ಚ್‌ನಲ್ಲಿ ಸಲ್ಲಿಸಿದ ತನ್ನ ದೂರನ್ನು ತಿರಸ್ಕರಿಸಿದ ಜುಲೈ 24ರ ಸ್ಪೀಕರ್ ಅವರ ನಿರ್ಧಾರವನ್ನು ಕೂಡ ದಿಲಾವರ್ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿ ಮಹೇಂದ್ರ ಕುಮಾರ್ ಗೋಯಲ್ ಅವರ ಪೀಠ ವಿಚಾರಣೆ ನಡೆಸಿ ನೋಟಿಸು ಜಾರಿ ಮಾಡಿದೆ.





