ಕುದುರೆ ವ್ಯಾಪಾರ ಭೀತಿ: ಕಾಂಗ್ರೆಸ್ ಶಾಸಕರನ್ನು ಬೇರೆಡೆ ಕರೆದೊಯ್ಯುವ ಸಾಧ್ಯತೆ

ಜೈಪುರ/ಹೊಸದಿಲ್ಲಿ, ಜು.31: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಬಂಡಾಯ ಎದ್ದ ಬಳಿಕ ರಾಜಸ್ಥಾನದ ಸುಮಾರು 100 ಶಾಸಕರು ಜೈಪುರದ ಸಮೀಪದ ಹೊಟೇಲ್‌ನಲ್ಲಿದ್ದು, ಈ ಶಾಸಕರನ್ನು ವಿಶೇಷ ವಿಮಾನದಲ್ಲಿ ಇಂದು ಬೇರೊಂದು ನಗರಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.
ತನಗೆ 102 ಶಾಸಕರ ಬೆಂಬಲವಿದೆ ಎಂದು ಹೇಳುತ್ತಿರುವ ಗೆಹ್ಲೋಟ್ ರಾಜಸ್ಥಾನದ ಅಧಿವೇಶನ ಆರಂಭವಾಗಲಿರುವ ಆಗಸ್ಟ್ 14ರ ತನಕ ಶಾಸಕರನ್ನು ವಿವಿಧ ಸ್ಥಳಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಸವಾಲಾಗಿದೆ.
ಸಿಎಂ ಗೆಹ್ಲೋಟ್ ಸದನದಲ್ಲಿ ಬಹುಮತ ಸಾಬೀತುಪಡಿಸಲು ಬಯಸಿದ್ದು, ಆದಷ್ಟು ಬೇಗನೆ ಅಧಿವೇಶನ ಕರೆಯಬೇಕೆಂದು ಗೆಹ್ಲೋಟ್ ಸಲ್ಲಿಸಿರುವ ಹಲವು ಮನವಿಗಳನ್ನು ರಾಜ್ಯಪಾಲ ಕಲರಾಜ್ ಮಿಶ್ರಾ ತಿರಸ್ಕರಿಸಿದ್ದರು. ಕೊನೆಗೂ ಆಗಸ್ಟ್ 14ರಿಂದ ಅಧಿವೇಶನ ಕರೆಯಲು ಸಮ್ಮತಿಸಿದ್ದರು.
ನಮ್ಮ ಶಾಸಕರನ್ನು ಲಂಚದ ಮೂಲಕ ಸೆಳೆಯಲು ಸಚಿನ್ ಪೈಲಟ್ ಬಣ ಬಿಜೆಪಿಯೊಂದಿಗೆ ಜೊತೆಗೂಡಿ ಪ್ರಯತ್ನಿಸುತ್ತಿದೆ ಎಂದು ಗುರುವಾರ ಆರೋಪಿಸಿದ್ದ ಗೆಹ್ಲೋಟ್, ಇದೀಗ ಅಧಿವೇಶನ ಕರೆದಿರುವ ಕಾರಣ ಶಾಸಕರ ಬೆಲೆ ಹೆಚ್ಚಾಗಿದೆ ಎಂದು ಹೇಳಿದ್ದರು. ಈ ಹಿಂದೆ ಮೊದಲ ಕಂತು 10 ಕೋಟಿ ರೂ., ಎರಡನೇ ಕಂತು 15 ಕೋಟಿ ರೂ.ಇತ್ತು. ಇದೀಗ ಅದಕ್ಕೆ ಮಿತಿ ಇಲ್ಲವಾಗಿದೆ. ಕುದುರೆ ವ್ಯಾಪಾರ ಯಾರು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.







