ಮೊದಲ ಬಾರಿ ಸ್ವಾತಂತ್ರ್ಯೋತ್ಸವ ವೀಕ್ಷಿಸಲಿರುವ ದೇಶದ ಕಟ್ಟಕಡೆಯ ಗ್ರಾಮ!
ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ ದಿನದಂದು ಬೆಳಿಗ್ಗೆ ಗ್ರಾಮಕ್ಕೆ ವಿದ್ಯುತ್
ಹೊಸದಿಲ್ಲಿ, ಜು.೩೧: ಉತ್ತರ ಕಾಶ್ಮೀರ ವಾಸ್ತವ ನಿಯಂತ್ರಣ ರೇಖೆಯ ಬಳಿಯ ಕಟ್ಟಕಡೆಯ ಗ್ರಾಮ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯನ್ನು ವೀಕ್ಷಿಸಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ಮಾಡುವ ಭಾಷಣದ ನೇರ ಪ್ರಸಾರವನ್ನು ಇಲ್ಲಿನ ಜನ 73 ವರ್ಷಗಳಲ್ಲೇ ಮೊದಲ ಬಾರಿಗೆ ನೋಡಬಹುದಾಗಿದೆ.
ಕಳೆದ 73 ವರ್ಷಗಳಿಂದ 12 ಸಾವಿರ ಕುಟುಂಬಗಳನ್ನು ಹೊಂದಿರುವ ಕೆರನ್ ಗ್ರಾಮದಲ್ಲಿ ಸಂಜೆ 6 ರಿಂದ 9 ಗಂಟೆ ವರೆಗೆ ಮಾತ್ರ ಡೀಸೆಲ್ ಜನರೇಟರ್ ಸೆಟ್ ಮೂಲಕ ವಿದ್ಯುತ್ ಕಲ್ಪಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ ದಿನದಂದು ಬೆಳಿಗ್ಗೆ ಕೂಡಾ ವಿದ್ಯುತ್ ಒದಗಿಸಲಾಗುತ್ತಿದೆ. ಈ ಗ್ರಾಮಕ್ಕೆ ವಿದ್ಯುತ್ ಪೂರೈಸುವ ಗ್ರಿಡ್ ದಿನದ 24 ಗಂಟೆಯೂ ವಿದ್ಯುತ್ ನೀಡುವುದು ಮಾತ್ರವಲ್ಲದೇ ಗ್ರಾಮವನ್ನು ಶಬ್ದ ಹಾಗೂ ಮಾಲಿನ್ಯದಿಂದ ಮುಕ್ತಗೊಳಿಸಲಿದೆ.
ಕಳೆದ ಒಂದು ವರ್ಷದಿಂದ ಗಡಿಪ್ರದೇಶದಲ್ಲಿ ವಿದ್ಯುದ್ದೀಕರಣದ ಪ್ರಯತ್ನ ನಡೆಸುತ್ತಿದ್ದೆವು. ಇದೀಗ ಗುರಿ ಮುಟ್ಟಿದ್ದೇವೆ ಎಂದು ಕುಪ್ವಾರ ಜಿಲ್ಲಾಧಿಕಾರಿ ಅಂಶುಲ್ ಗಾರ್ಗ್ ಹೇಳಿದ್ದಾರೆ.
ಇದರ ಜತೆಗೆ ಜಿಲ್ಲೆಯಲ್ಲಿ ರಸ್ತೆಗಳನ್ನು ಕೂಡಾ ಸುಧಾರಿಸಲಾಗಿದೆ.
ಕಿಶನ್ ಗಂಗಾ ನದಿ ದಂಡೆಯಲ್ಲಿರುವ ಕೆರನ್ ಗ್ರಾಮ ಪ್ರತಿ ವರ್ಷ ತೀವ್ರ ಚಳಿಯಿಂದಾಗಿ ಆರು ತಿಂಗಳ ಕಾಲ ರಾಜ್ಯದ ಜತೆಗಿನ ಸಂಪರ್ಕ ಕಡಿದುಕೊಳ್ಳುತ್ತದೆ. ಈ ಬಾರಿ ಚಳಿಗಾಲದಲ್ಲೂ ಚಲಿಸುವ ರಸ್ತೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು ಎಂಧು ಗಾರ್ಗ್ ಹೇಳುತ್ತಾರೆ.
ಕುಪ್ವಾರ ಜಿಲ್ಲೆ ಪಾಕಿಸ್ತಾನದ ಜತೆ 170 ಕಿಲೋಮೀಟರ್ ವಾಸ್ತವ ನಿಯಂತ್ರಣ ರೇಖೆಯನ್ನು ಹೊಂದಿದೆ. ಐದು ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿ 356 ಪಂಚಾಯ್ತಿಗಳಿವೆ.





