ಕೊರೋನ ಭೀತಿ: ಜ್ವರಪೀಡಿತ ದಂಪತಿ ಆತ್ಮಹತ್ಯೆ

ಹೈದರಾಬಾದ್: ಕಳೆದ ಹತ್ತು ದಿನಗಳಿಂದ ಜ್ವರ ಮತ್ತು ಕಫ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ ದಂಪತಿ ತಮಗೆ ಕೊರೋನ ಸೋಂಕು ತಗಲಿರಬಹುದು ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಖೈರತಾಬಾದ್‍ನಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ವಿಷ ಸೇವಿಸಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಂಜಗುಟ್ಟಾ ಪೊಲೀಸರು ಆತ್ಮಹತ್ಯೆ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದು, ತಮ್ಮೊಂದಿಗೆ ಇರುವ ಮೊಮ್ಮಗನಿಗೆ ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇದರಲ್ಲಿ ವಿವರಿಸಲಾಗಿದೆ.
ಮೃತ ದಂಪತಿಯನ್ನು ವೈ.ವಿ.ನಾಯ್ಡು (63) ಮತ್ತು ವೈ.ವಿ.ಲಕ್ಷ್ಮಿ (60) ಎಂದು ಗುರುತಿಸಲಾಗಿದೆ. ಇವರು ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ವಾಸವಿದ್ದರು. 10 ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಕೋವಿಡ್-19 ಸೋಂಕು ತಗುಲಿದ ಭೀತಿಯಿಂದ ವಿಷಪೂರಿತ ತಂಪುಪಾನೀಯ ಸೇವಿಸಿದ್ದಾರೆ.
ಶನಿವಾರ ಮಗ ವೈ.ವಿ.ರಾಜು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದರು. ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು ಎಂದು ಪೊಲೀಸರು ವಿವರಿಸಿದ್ದಾರೆ.







