ಅಮೆರಿಕ: ಜಾಗಿಂಗ್ ಮಾಡುತ್ತಿದ್ದಾಗ ಭಾರತ ಮೂಲದ ಮಹಿಳೆಯ ಕೊಲೆ

ಹ್ಯೂಸ್ಟನ್ (ಅಮೆರಿಕ), ಆ. 4: ಅಮೆರಿಕದಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿರುವ ಭಾರತ ಮೂಲದ ಮಹಿಳೆಯೊಬ್ಬರು ಜಾಗಿಂಗ್ ಮಾಡುತ್ತಿದ್ದ ವೇಳೆ ಕೊಲೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೃತರನ್ನು 43 ವರ್ಷದ ಶರ್ಮಿಸ್ಠಾ ಸೇನ್ ಎಂದು ಗುರುತಿಸಲಾಗಿದೆ. ಅವರು ಟೆಕ್ಸಾಸ್ ರಾಜ್ಯದ ಪ್ಲಾನೊ ನಗರದಲ್ಲಿ ವಾಸವಾಗಿದ್ದರು. ಅವರು ಚಿಶಾಮ್ ಟ್ರೇಲ್ ಪಾರ್ಕ್ ಸಮೀಪ ಶನಿವಾರ ಜಾಗಿಂಗ್ ನಡೆಸುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಆಕ್ರಮಣ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ಅವರು ಲೆಗಸಿ ಡ್ರೈವ್ ಸಮೀಪ ನೆಲದಲ್ಲಿ ಬಿದ್ದಿರುವುದನ್ನು ನೋಡಿದ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಸುದ್ದಿ ವೆಬ್‌ಸೈಟೊಂದು ವರದಿ ಮಾಡಿದೆ.
ಇಬ್ಬರು ಪುತ್ರರ ತಾಯಿಯಾಗಿದ್ದ ಸೇನ್ ಫಾರ್ಮಾಸಿಸ್ಟ್ ಮತ್ತು ಸಂಶೋಧಕಿಯಾಗಿದ್ದರು. ಅವರು ಮೊಲಿಕ್ಯುಲರ್ ಬಯಾಲಜಿ ಕಲಿತಿದ್ದು, ಕ್ಯಾನ್ಸರ್ ರೋಗಿಗಗಳ ಚಿಕಿತ್ಸೆಯಲ್ಲಿ ತೊಡಗಿದ್ದರು ಎಂದು ‘ಫಾಕ್ಸ್4ನ್ಯೂಸ್’ ವರದಿ ಮಾಡಿದೆ.
ಕಳ್ಳತನದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆ ನಡೆದ ಸುಮಾರು ಅದೇ ಹೊತ್ತಿನಲ್ಲಿ ಸಮೀಪದ ಮನೆಯೊಂದಕ್ಕೆ ಕಳ್ಳನೊಬ್ಬ ನುಗ್ಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.