“ಸಣ್ಣ ಗೂಡಿನಂತಹ ಕೊಠಡಿಗಳಲ್ಲಿ 50 ಜನರು; ಕಾಲು ಚಾಚಿ ಮಲಗಲೂ ಜಾಗವಿಲ್ಲ”
ಚೀನಾದ ಉಯಿಘರ್ ಮುಸ್ಲಿಂ ದಿಗ್ಬಂಧನ ಕೇಂದ್ರಗಳ ಕರಾಳತೆ ಬಿಚ್ಚಿಟ್ಟ ಸೋರಿಕೆಯಾದ ಸಂದೇಶಗಳು

ಬೀಜಿಂಗ್: ಚೀನಾ `ಮರುಶಿಕ್ಷಣ ಶಿಬಿರಗಳು' ಎಂದು ಕರೆಯುವ ಉಯಿಘರ್ ಮುಸ್ಲಿಮರ ದಿಗ್ಭಂಧನ ಕೇಂದ್ರಗಳಲ್ಲಿನ ಸ್ಥಿತಿಗತಿಗಳು ಹೇಗಿವೆ ಎಂಬುದು ಅಲ್ಲಿ ವಾಸಿಸುತ್ತಿರುವವರು ಕಳುಹಿಸಿದ ಹಾಗೂ ಸೋರಿಕೆಯಾದ ಟೆಕ್ಸ್ಟ್ ಸಂದೇಶಗಳು, ಚಿತ್ರಗಳು ಹಾಗೂ ಪುರಾವೆಗಳಿಂದ ಬಹಿರಂಗಗೊಂಡಿದೆ.
ಮೆರ್ದಾನ್ ಗಫ್ಫಾರ್ ಎಂಬವರು ನೀಡಿದ ಮಾಹಿತಿಯನ್ನು ಬಿಬಿಸಿ, ಗ್ಲೋಬ್ ಹಾಗೂ ಮೈಲ್ ಪ್ರಕಟಿಸಿದ್ದು, ಈ ದಿಗ್ಬಂಧನ ಶಿಬಿರಗಳಲ್ಲಿ ನಡೆಯುತ್ತಿದೆಯೆನ್ನಲಾದ ಮಾನವ ಹಕ್ಕು ಉಲ್ಲಂಘನೆಗಳು ಬಹಿರಂಗಗೊಂಡಿದೆ. ಮೆರ್ದಾನ್ ಗಫ್ಫಾರ್ ಉಯಿಘರ್ ಸಮುದಾಯಕ್ಕೆ ಸೇರಿದವರಾಗಿದ್ದು, ತನ್ನ ದಿಗ್ಬಂಧನವಾದ ವೇಳೆ ತನ್ನೊಂದಿಗೆ ಫೋನ್ ಕೂಡ ಕೊಂಡೊಯ್ದಿದ್ದರು.
ಆತ ತನ್ನ ಕುಟುಂಬ ಸದಸ್ಯರಿಗೆ ಟೆಕ್ಸ್ ಸಂದೇಶಗಳನ್ನು ಕಳುಹಿಸಿದ್ದು ಅದರಲ್ಲಿನ ಮಾಹಿತಿಯಂತೆ ಅಲ್ಲಿ ಜನರನ್ನು ಸಣ್ಣ ಗೂಡಿನಂತಹ ಕೊಠಡಿಗಳಲ್ಲಿ ಇರಿಸಲಾಗುತ್ತಿದೆ ಹಾಗೂ ಎಲ್ಲರಿಗೂ ಕಾಲು ಚಾಚಿ ಮಲಗಲು ಕೂಡಲ್ಲಿ ಸಾಕಷ್ಟು ಜಾಗವಿಲ್ಲ ಎಂದು ವಿವರಿಸಿದ್ದಾರೆ.
ಗಫ್ಫಾರ್ ರನ್ನು ವಶಕ್ಕೆ ಪಡೆದಿರುವ ವಿಚಾರ ಮೊದಲು ಮಾರ್ಚ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಬಂದಿತ್ತು. ಮೂವತ್ತು ವರ್ಷದ ಇವರು ರಿಟೇಲ್ ಕಂಪೆನಿ ಟವೊಬಾವೋಗೆ ಕೆಲಸ ಮಾಡುತ್ತಿದ್ದರು. ಅವರನ್ನು ವಶಪಡಿಸಿಕೊಂಡಂದಿನಿಂದ ಚೀನಾದ ಹೊರಗೆ ವಾಸಿಸುವ ಕುಟುಂಬಕ್ಕೆ ಅವರ ಕುರಿತು ಹೆಚ್ಚು ಮಾಹಿತಿಯಿಲ್ಲ.
ಮೆರ್ದಾನ್ ಗಫ್ಫಾರ್ ಇಂಟರ್ನೆಟ್ ಬ್ರೌಸಿಂಗ್ ಇತಿಹಾಸ ಗಮನಿಸಿ ಹಾಗೂ ಆತ ವಿದೇಶಿ ವೆಬ್ ಸೈಟ್‍ಗಳಿಗೆ ಭೇಟಿ ನೀಡುತ್ತಿದ್ದ ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂದು ಅವರ 16 ವರ್ಷದ ಸೋದರ ಹೇಳುತ್ತಾನೆ.
“50ರಿಂದ 60 ಜನರನ್ನು, 50 ಚದರ ಮೀಟರ್ ಕೂಡ ಇರದ ಒಂದು ಸಣ್ಣ ಕೊಠಡಿಯಲ್ಲಿ ಕೂಡಿ ಹಾಕಿದ್ದನ್ನು ನೋಡಿದ್ದೆ. ಎಲ್ಲರಿಗೂ ಮಲಗಲು ಜಾಗವಿಲ್ಲದೆ ಕೆಲವರು ಕಾಲುಗಳನ್ನು ಬಗ್ಗಿಸಿ ಕುಳಿತುಕೊಳ್ಳಬೇಕಿತ್ತು'' ಎಂದು ಗಫ್ಫಾರ್ ರ ಸಂದೇಶವೊಂದು ತಿಳಿಸಿದೆ.
ಸ್ವತಃ ಗಫ್ಫಾರ್ ಗೆ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಮಂಚಕ್ಕೆ ಸಿಕ್ಕಿಸಲಾಗಿರುವ ಕೈಕೋಳ ಹಾಕಿರುವುದು ಒಂದು ಚಿತ್ರದಲ್ಲಿ ಕಾಣಿಸಿದೆ. ಕೋವಿಡ್ ಲಕ್ಷಣಗಳನ್ನು ಹೊಂದಿದವರನ್ನು ಬೇರೆ ಕಡೆಗೆ ಅಧಿಕಾರಿಗಳು ಸಾಗಿಸಿದಾಗ ಕೋವಿಡ್ ಲಕ್ಷಣಗಳನ್ನು ಹೊಂದಿದ್ದ ಗಫ್ಫಾರ್ ರನ್ನೂ ಐಸೊಲೇಶನ್‍ಗೆ ಕಳುಹಿಸಲಾಗಿತ್ತು.
ಅಲ್ಲಿರುವ ಎಲ್ಲರೂ ಮುಖ ಮುಚ್ಚುವ ಬಟ್ಟೆ ಹಾಗೂ ಫೋರ್-ಪೀಸ್ ಸೂಟ್ ಧರಿಸಬೇಕಿತ್ತು, ಕೊಠಡಿಯಲ್ಲಿ ಒಂದು ಕಿಟಕಿ ಹಾಗೂ 50 ಮಂದಿಗೆ ಒಂದು ಫ್ಯಾನ್, ನೆಲಹಾಸು ಕೊಳಕಾಗಿತ್ತು ಹಾಗೂ ಅದರಲ್ಲಿ ಸಾಕಷ್ಟು ಕಸ ಹಾಗೂ ಹೇನುಗಳೂ ಇದ್ದವು ಎಂದು ಗಫ್ಫಾರ್ ಸಂದೇಶಗಳಲ್ಲಿ ವಿವರಿಸಲಾಗಿದೆ.
ಚೀನಾ ಆಡಳಿತವು 10 ಲಕ್ಷದಿಂದ 30 ಲಕ್ಷದಷ್ಟು ಉಯಿಘರ್ ಮುಸ್ಲಿಮರನ್ನು ದಿಗ್ಬಂಧನ ಶಿಬಿರಗಳಲ್ಲಿರಿಸಿರಬಹುದೆಂದು ಹೇಳಲಾಗಿದೆ.