ಸಿಎಂ ಬಿಎಸ್‍ವೈ, ವಿಪಕ್ಷ ನಾಯಕ ಸಿದ್ದರಾಮಯ್ಯರ ಆರೋಗ್ಯ ಸ್ಥಿರ

ಬೆಂಗಳೂರು, ಆ. 6: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಗ್ಯ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೋನ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಅವರ ರಕ್ತದೊತ್ತಡ(ಬಿಪಿ) ಮತ್ತು ಸಕ್ಕರೆ (ಶುಗರ್) ಅಂಶ ಪರೀಕ್ಷಿಸಿದ್ದು, ಎಲ್ಲವೂ ಮಾಮೂಲಿನಂತಿವೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಗ್ಯವೂ ಸ್ಥಿರವಾಗಿದ್ದು, ಅವರಿಗೆ ಜ್ವರ ಕಡಿಮೆಯಾಗಿದೆ. ಜತೆಗೆ ಮೂತ್ರಕೋಶದ ಸೋಂಕು ಕಡಿಮೆಯಾಗಿದ್ದು, ಅವರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಉಭಯ ನಾಯಕರು ನಗರದ ಮಣಿಪಾಲ್ ಆಸ್ಪತ್ರೆಯ ಐದನೆ ಮಹಡಿಯಲ್ಲಿರುವ ಪ್ರತ್ಯೇಕ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರವಿವಾರ(ಆ.2) ಆಸ್ಪತ್ರೆಗೆ ದಾಖಲಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸೋಮವಾರ(ಆ.3)ದಂದು ಆಸ್ಪತ್ರೆಗೆ ದಾಖಲಾಗಿದ್ದರು. ಉಭಯ ನಾಯಕರ ಆರೋಗ್ಯದ ಬಗ್ಗೆ ಆಸ್ಪತ್ರೆಯ ವೈದ್ಯರು ವಿಶೇಷ ನಿಗಾವಹಿಸಿದ್ದು, ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.







