ಲೇಖಕಿ, ಸಾಮಾಜಿಕ ಹೋರಾಟಗಾರ್ತಿ, ಚಿತ್ರ ನಿರ್ಮಾಪಕಿ ಸಾದಿಯಾ ದೆಹಲವಿ ನಿಧನ

ಹೊಸದಿಲ್ಲಿ, ಆ. 6: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದಿಲ್ಲಿ ಮೂಲದ ಜನಪ್ರಿಯ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಚಿತ್ರ ನಿರ್ಮಾಪಕಿ ಸಾದಿಯಾ ದೆಹಲವಿ (63) ಅವರು ಬುಧವಾರ ತನ್ನ ನಿವಾಸದಲ್ಲಿ ನಿಧನರಾದರು.
ದಿಲ್ಲಿಯ ಜನಪ್ರಿಯ ಸಾಂಸ್ಕೃತಿಕ ವ್ಯಕ್ತಿತ್ವ, ಆತ್ಮೀಯ ಸ್ನೇಹಿತೆ ಹಾಗೂ ಅದ್ಭುತ ವ್ಯಕ್ತಿಯಾಗಿರುವ ಸಾದಿಯಾ ದೆಹಲವಿಯ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರ ಆತ್ಮಕ್ಕೆ ಭಗಂವತನು ಶಾಂತಿ ನೀಡಲಿ ಎಂದು ಖ್ಯಾತ ಇತಿಹಾಸ ತಜ್ಞ ಇರ್ಫಾನ್ ಹಬೀಬ್ ಅವರು ಹೇಳಿದ್ದಾರೆ.
ದೆಹಲವಿ ಅವರು ‘ಶಮಾ’ ರಾಜ ಕುಟುಂಬದಿಂದ ಬಂದವರು. ಮಹಿಳೆಯರಿಗೆ ಸಂಬಂಧಿಸಿದ ಉರ್ದು ಪತ್ರಿಕೆ ‘ಬಾನೊ’ದ ಸಂಪಾದಕಿಯಾಗಿದ್ದರು. ಅವರ ಅಜ್ಜ ಹಾಫೀಝ್ ಯೂಸುಫ್ ದೆಹಲವಿ ಅವರು 1938ರಲ್ಲಿ ಉರ್ದು ಚಲನಚಿತ್ರ ಹಾಗೂ ಸಾಹಿತ್ಯ ಮಾಸಿಕ ‘ಶಮಾ’ವನ್ನು ಆರಂಭಿಸಿದ್ದರು. ಜನಪ್ರಿಯ ಆಹಾರ ತಜ್ಞೆ ಕೂಡ ಆಗಿದ್ದ ಅವರು ದಿಲ್ಲಿಯ ಅಡುಗೆ ಚರಿತ್ರೆ ಬಗ್ಗೆ 2017ರಲ್ಲಿ ‘ಜಾಸ್ಮಿನ್ ಆ್ಯಂಡ್ ಜಿನ್ಸ್: ಮೆಮೊರಿಸ್ ಆ್ಯಂಡ್ ರೆಸಿಪಿಸ್ ಆಫ್ ಮೈ ದಿಲ್ಲಿ’ ಪುಸ್ತಕ ಬರೆದಿದ್ದಾರೆ. ಬಹು ಪ್ರತಿಭೆಯ ದೆಹಲವಿ ಅವರು ರಂಗಭೂಮಿಯ ಹಿರಿಯ ನಟಿ ರೊಹ್ರಾ ಸೆಹ್ಗಲ್ ನಟನೆಯ ‘ಅಮ್ಮಾ ಆ್ಯಂಡ್ ಫ್ಯಾಮಿಲಿ’ (1995) ಸಹಿತ ಹಲವು ಸಾಕ್ಷಚಿತ್ರ, ದೂರದರ್ಶನ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ ಹಾಗೂ ನಿರ್ಮಾಣ ಮಾಡಿದ್ದಾರೆ.





