ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮ ಮಂದಿರ ಪರ-ವಿರೋಧ ಪ್ರದರ್ಶನ
ಎರಡು ಗುಂಪುಗಳಿಂದ ಘೋಷಣೆ
ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಆ. 6: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದ ವಿಚಾರದಲ್ಲಿ ಅಮೆರಿಕದಲ್ಲಿರುವ ಭಾರತೀಯ ವಲಸಿಗರು ಬುಧವಾರ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ನಲ್ಲಿ ಜಮಾಯಿಸಿದರು. ಕೆಲವರು ರಾಮ ಮಂದಿರ ನಿರ್ಮಾಣವನ್ನು ಸಂಭ್ರಮಿಸಿದರೆ, ಇತರರು ಅದರ ವಿರುದ್ಧ ಪ್ರತಿಭಟನೆ ನಡೆಸಿದರು ಹಾಗೂ ಭಾರತದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸಿದರು.
ಈ ಎರಡೂ ಗುಂಪುಗಳು ಘೋಷಣೆಗಳನ್ನು ಕೂಗಿದವು 1992ರಲ್ಲಿ ಧ್ವಂಸಗೊಳಿಸಲಾದ ಅಯೋಧ್ಯೆಯ ಬಾಬರಿ ಮಸೀದಿಯ ಸ್ಥಳದಲ್ಲಿ ನಡೆದ ಭೂಮಿಪೂಜನ ಕಾರ್ಯಕ್ರಮಕ್ಕೆ ಒಂದು ಗುಂಪು ಬೆಂಬಲ ಘೋಷಿಸಿದರೆ, ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿತು.
ಪ್ರಸ್ತಾಪಿತ ರಾಮ ಮಂದಿರದ ಚಿತ್ರವನ್ನು ಟೈಮ್ಸ್ ಸ್ಕ್ವೇರ್‌ನಲ್ಲಿನ ಬೃಹತ್ ನಾಸ್ಡಾಕ್ ಪರದೆಯ ಮೇಲೆ ಬಿಂಬಿಸುವ, ಭಾರತೀಯ ಜನತಾ ಪಕ್ಷದ ಪರವಾಗಿರುವ ಗುಂಪು ಎನ್ನಲಾದ ಅಮೆರಿಕನ್ ಇಂಡಿಯ ಪಬ್ಲಿಕ್ ಅಫೇರ್ಸ್ ಕಮಿಟಿಯ ಮಹತ್ವಾಕಾಂಕ್ಷೆಯ ಯೋಜನೆಯು ಸಾಕಾರಗೊಳ್ಳಲಿಲ್ಲವಾದರೂ, ಮಂದಿರದ ಡಿಜಿಟಲ್ ಫಲಕವೊಂದು ಹರ್ಶೀಸ್ ಸ್ಟೋರ್‌ನಲ್ಲಿ ದಿನದ ಸ್ವಲ್ಪ ಅವಧಿಗೆ ಪ್ರಸಾರಗೊಂಡಿತು.
ಇದೇ ಸಂದರ್ಭದಲ್ಲಿ, ದಕ್ಷಿಣ ಏಶ್ಯದ ಹಲವಾರು ನಾಗರಿಕ ಹಕ್ಕುಗಳ ಗುಂಪುಗಳು ಮಂದಿರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದವು. ‘ಕಾಶ್ಮೀರ್ ಲೈವ್ಸ್ ಮ್ಯಾಟರ್’ ಮತ್ತು ‘ಕಾಶ್ಮೀರ್ ಸೀಜ್ ಡೇ’ ಎಂಬ ಡಿಜಿಟಲ್ ಪಲಕಗಳನ್ನು ಈ ಗುಂಪುಗಳು ಪ್ರದರ್ಶಿಸಿದವು.
ನಾಗರಿಕ ಹಕ್ಕುಗಳ ಹೋರಾಟಗಾರರು, ವರ್ಷವಿಡೀ ಲಾಕ್ಡೌನನ್ನು ಪ್ರತಿಭಟಿಸುತ್ತಿರುವ ಕಾಶ್ಮೀರಿಗಳು ಮತ್ತು ಸಿಖ್ ಗುಂಪುಗಳು ಸೇರಿದಂತೆ ಹಲವು ಗುಂಪುಗಳು ಟೈಮ್ಸ್ ಸ್ಕ್ವೇರ್‌ನಲ್ಲಿ ರಾಮ ಮಂದಿರದ ವಿರುದ್ಧ ಪ್ರತಿಭಟನೆ ನಡೆಸಿದವು.