ಬಜ್ಪೆ : ಬೈಕ್ ಕಳವು ಪ್ರಕರಣ; ಐವರ ಬಂಧನ

ಮಂಗಳೂರು, ಆ.7: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬಜ್ಪೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಏಳು ಬೈಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸುರತ್ಕಲ್ 3ನೇ ಬ್ಲಾಕ್‌ನ ಜನತಾ ಕಾಲನಿಯ ವಿಜಯ ಬೋವಿ (23), ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (27), ಮುಲ್ಕಿ ಅಶ್ವತ್ಥಕಟ್ಟೆಯ ಅಭಿಜಿತ್ ಬಂಗೇರಾ (26), ಕಾಟಿಪಳ್ಳ ಕೃಷ್ಣಾಪುರ 5ನೇ ಬ್ಲಾಕ್‌ನ ರಕ್ಷಿತ್ ಕುಲಾಲ್ (22), ಬಂಟ್ವಾಳದ ಹೂಹಾಕುವಕಲ್ಲು ನಿವಾಸಿ ಸುದೀಶ್ ನಾಯರ್ (20) ಬಂಧಿತ ಆರೋಪಿಗಳು.
ಘಟನೆ ವಿವರ: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಹೆಚ್ಚಳದಿಂದಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ಆಯುಕ್ತರು ನಿರ್ದೇಶಿಸಿದ್ದರು. ಅದರಂತೆ ಆ.6ರಂದು ಸಂಜೆ ಬಜ್ಪೆ ವ್ಯಾಪ್ತಿಯಲ್ಲಿ ಬಜ್ಪೆ ಠಾಣಾಧಿಕಾರಿ ಮತ್ತು ಸಿಬ್ಬಂದಿ ವಾಹನ ತಪಾಸಣೆ ಕಾರ್ಯ ಕೈಗೊಳ್ಳಲಾಗಿತ್ತು. ಎರಡು ಬೈಕ್‌ಗಳಲ್ಲಿ ಬರುತ್ತಿದ್ದ ನಾಲ್ವರನ್ನು ತಡೆದು ನಿಲ್ಲಿಸಿ, ವಿಚಾರಿಸಿದಾಗ ಬೈಕ್ ಕಳವು ವಿಷಯ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಜ್ಪೆ ಠಾಣಾ ವ್ಯಾಪ್ತಿಯ ಬ್ಯಾಂಕ್‌ವೊಂದರ ಬಳಿಯಿಂದ ಬಜಾಜ್ ಡಿಸ್ಕವರಿ ಬೈಕ್, ಈಶ್ವರಕಟ್ಟೆಯಿಂದ ಪಲ್ಸರ್ ಎನ್.ಎಸ್. 160, ಎಡಪದವಿ ನಿಂದ ಪಲ್ಸರ್ 150, ಯಮಹ ಎಫ್‌ಝೆಡ್, ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರಿನಿಂದ ಪಲ್ಸರ್ 150, ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯಿಂದ ಆ್ಯಕ್ಟೀವಾ ಸ್ಕೂಟರ್‌ನ್ನು ಕಳವು ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಡಿಬಿದಿರೆ ಪೇಟೆಯ ದೇವಸ್ಥಾನವೊಂದರ ಎದುರಿನ ಚಿನ್ನದಂಗಡಿಯೊಂದರ ದರೋಡೆ ಮಾಡಲು ಸಂಚು ರೂಪಿಸಿರುವ ವಿಷಯ ವಿಚಾರಣೆ ವೇಳೆ ಬಹಿರಂಗವಾಗಿದೆ. ಬಂಧಿತ ಆರೋಪಿಗಳಿಂದ ಐದು ಲಕ್ಷ ರೂ. ಮೌಲ್ಯದ ಏಳು ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಪ್ರಕರಣ: ಮೊದಲ ಆರೋಪಿ ವಿಜಯ ಬೋವಿ ವಿರುದ್ಧ ಬಜ್ಪೆ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ತಲಾ ಮೂರು ಬೈಕ್ ಕಳವು ಪ್ರಕರಣ, ಮೂಡುಬಿದಿರೆ, ಪಣಂಬೂರು ಕಾವೂರು ಠಾಣೆಯಲ್ಲಿ ತಲಾ ಒಂದು ಬೈಕ್ ಕಳವು ಪ್ರಕರಣ ಹಾಗೂ ಕಾವೂರು ಠಾಣೆಯಲ್ಲಿ ಗಾಂಜಾ ಪ್ರಕರಣಗಳು ದಾಖಲಾಗಿವೆ.
ಎರಡನೇ ಆರೋಪಿ ಪ್ರದೀಪ್ ಪೂಜಾರಿ ವಿರುದ್ಧ ಬಜ್ಪೆ ಠಾಣಾ ವ್ಯಾಪ್ತಿ ಭೂಗತ ಪಾತಕಿ ಮಾಡೂರು ಯೂಸುಫ್ ಕೊಲೆ ಪ್ರಕರಣ, ಮುಲ್ಕಿ ಠಾಣೆ ವ್ಯಾಪ್ತಿ ದರೋಡೆಗೆ ಸಂಚು, ಮಂಗಳೂರು ಉತ್ತರ (ಬಂದರ್) ಠಾಣಾ ವ್ಯಾಪ್ತಿ ಟೆಕ್ಕಿ ಮೋಹನ್ ಕೊಲೆ ಪ್ರಕರಣ, ಬೆಳ್ತಂಗಡಿ ಠಾಣಾ ವ್ಯಾಪ್ತಿ ಮೂರು ಬೈಕ್ ಕಳವು, ಮೂಡುಬಿದಿರೆ ಠಾಣಾ ವ್ಯಾಪ್ತಿ ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
ಮೂರನೇ ಆರೋಪಿ ಅಭಿಜಿತ್ ಬಂಗೇರಾ ವಿರುದ್ಧ ಕಾಪೂ ಠಾಣಾ ವ್ಯಾಪ್ತಿ ಹಲ್ಲೆ, ಗಲಾಟೆ ಸಂಬಂಧಿಸಿದ ಮೂರು ಪ್ರಕರಣ, ಮೈಸೂರು ನರಸಿಂಹರಾಜ ಠಾಣಾ ವ್ಯಾಪ್ತಿ ಕೊಲೆಯತ್ನ, ಬಜ್ಪೆ ವ್ಯಾಪ್ತಿ ಎರಡು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
ನಾಲ್ಕನೇ ಆರೋಪಿ ರಕ್ಷಿತ್ ಕುಲಾಲ್ ವಿರುದ್ಧ ಸುರತ್ಕಲ್ ಠಾಣಾ ವ್ಯಾಪ್ತಿ ಸುಲಿಗೆ, ಬಜ್ಪೆ ಹಾಗೂ ಕಾವೂರು ಠಾಣಾ ವ್ಯಾಪ್ತಿ ತಲಾ ಒಂದು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
ಐದನೇ ಆರೋಪಿ ಸುದೀಶ್ ನಾಯರ್ ವಿರುದ್ಧ ಬೆಳ್ತಂಗಡಿ ಠಾಣಾ ವ್ಯಾಪ್ತಿ ಮೂರು ಬೈಕ್ ಕಳವು, ಉಳ್ಳಾಲ ಠಾಣಾ ವ್ಯಾಪ್ತಿ ಗಲಾಟೆ ಸಂಬಂಧಿ ಸಿದ ಪ್ರಕರಣ, ಬಜ್ಪೆ ಹಾಗೂ ಪಣಂಬೂರು ಠಾಣಾ ವ್ಯಾಪ್ತಿ ತಲಾ ಒಂದು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಶುಗಿರಿ ಹಾಗೂ ಲಕ್ಷ್ಮೀಗಣೇಶ್ ಮಾರ್ಗದರ್ಶ ನದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳೆಯಪ್ಪ ಹಾಗೂ ಬಜ್ಪೆ ಪೊಲೀಸ್ ವರಿಷ್ಠಾಧಿಕಾರಿ ಕೆ.ಆರ್.ನಾಯ್ಕಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾಧಿಕಾರಿಗಳಾದ ಕಮಲಾ, ಸತೀಶ್ ಎಂ.ಪಿ., ರಾಘವೇಂದ್ರ ನಾಯ್ಕೆ ಹಾಗೂ ಸಿಬ್ಬಂದಿಯಾದ ರಾಮ ಪೂಜಾರಿ, ಹೊನ್ನಪ್ಪ ಗೌಡ, ಸುಧೀರ್ ಶೆಟ್ಟಿ, ರಾಜೇಶ್, ಸಂತೋಷ್ ಡಿ.ಕೆ., ರೋಹಿತ್‌ಕುಮಾರ್, ವಕೀಲ್ ಎನ್. ಲಮಾಣಿ, ರಶೀದ್ ಶೇಖ್, ಕುಮಾರಸ್ವಾಮಿ, ಸಂಜೀವ್ ಭಾಗವಹಿಸಿದ್ದರು.








