ಉಡುಪಿ: ಮೊದಲ ಬಾರಿ ದಿನದಲ್ಲಿ ತ್ರಿಶತಕ ದಾಟಿದ (314) ಕೊರೋನ ಸೋಂಕಿತರು
ಶನಿವಾರ ಕೋವಿಡ್ಗೆ 5 ಬಲಿ; ಮೃತರ ಸಂಖ್ಯೆ 60ಕ್ಕೆ ಏರಿಕೆ
ಉಡುಪಿ, ಆ.8: ಜಿಲ್ಲೆಯಲ್ಲಿ ಶನಿವಾರ ಕೋವಿಡ್-19 ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಹೊಸ ದಾಖಲೆಯನ್ನು ಬರೆದಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಸೋಂಕಿತರ ಸಂಖ್ಯೆ ತ್ರಿಶತಕ ಗಡಿ ದಾಟಿ 314ಕ್ಕೇರಿದೆ. ಅಲ್ಲದೇ ದಿನದಲ್ಲಿ 1379 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಗಳು ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಕೊರೋನ ಸೋಂಕು ಪತ್ತೆಯಾದ 314 ಮಂದಿಯಲ್ಲಿ ಉಡುಪಿ ತಾಲೂಕಿನ 192 ಮಂದಿ, ಕುಂದಾಪುರ ತಾಲೂಕಿನ 87 ಹಾಗೂ ಕಾರ್ಕಳ ತಾಲೂಕಿನ 30 ಮಂದಿ ಸೇರಿದ್ದಾರೆ. ಉಳಿದ ಐವರು ಹೊರಜಿಲ್ಲೆಯವರಾಗಿದ್ದು, ಜಿಲ್ಲೆಯಲ್ಲಿ ಚಿಕಿತ್ಸೆಗೆ ಬಂದು ಪಾಸಿಟಿವ್ ಆಗಿದ್ದಾರೆ. ಮಕ್ಕಳು ಸೇರಿದಂತೆ 164 ಮಂದಿ ಪುರುಷರು ಹಾಗೂ 150 ಮಂದಿ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ. ಇವರಲ್ಲಿ 116 ಪುರುಷರು ಹಾಗೂ 110 ಮಹಿಳೆಯರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಇಂದಿನ 314 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 5,919ಕ್ಕೇರಿದೆ ಎಂದು ಡಾ.ಸೂಡ ತಿಳಿಸಿದರು.
ಇಂದು ಕೊರೋನ ಪಾಸಿಟಿವ್ ದೃಢಗೊಂಡ 314 ಮಂದಿಯಲ್ಲಿ 156 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 69 ಮಂದಿ ಶೀತಜ್ವರ ದಿಂದ, 6 ಮಂದಿ ಉಸಿರಾಟ ತೊಂದರೆಯಿಂದ ಬಳಲುತಿದ್ದು ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಾಲ್ಕು ಮಂದಿ ಪ್ರವಾಸದಿಂದ ಮರಳಿದ್ದು, ಪಾಸಿಟಿವ್ ಬಂದರೆ, 79 ಮಂದಿಯ ಸೋಂಕಿ ಸಂಪರ್ಕ ತನಿಖೆಯಲ್ಲಿದೆ ಎಂದರು.
89 ಮಂದಿ ಗುಣಮುಖ: ಜಿಲ್ಲೆಯಲ್ಲಿ ಶನಿವಾರ ಒಟ್ಟು 89 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 59 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 30 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 3347ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2512 ಮಂದಿ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 1287 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1225 ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್ಓ ಹೇಳಿದರು.
ದಾಖಲೆ 2030 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಇಂದು 2030 ಮಂದಿಯ ಗಂಟಲುದ್ರವದ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಇದು ಈವರೆಗಿನ ಹೊಸ ದಾಖಲೆಯಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 1265 ಮಂದಿ, ಕೋವಿಡ್ ಸಂಪರ್ಕಿತರು 261 ಮಂದಿ ಇದ್ದರೆ, ಉಸಿರಾಟ ತೊಂದರೆಯ ಇಬ್ಬರು, ಶೀತಜ್ವರದಿಂದ ಬಳಲುವ 25 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್ಸ್ಪಾಟ್ಗಳಿಂದ ಆಗಮಿಸಿದ 477 ಮಂದಿಯ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪಡೆದ 2030 ಸ್ಯಾಂಪಲ್ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 43,441ಕ್ಕೇರಿದೆ. ಇವುಗಳಲ್ಲಿ ಈವರೆಗೆ 35,982 ನೆಗೆಟಿವ್, 5919 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 60 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 1540 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.
ಜಿಲ್ಲೆಯಲ್ಲಿ ಶನಿವಾರ 314 ಮಂದಿಯನ್ನು ಆಸ್ಪತ್ರೆಗಳ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ.ಇವರಲ್ಲಿ ಒಟ್ಟು 203 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ 111 ಮಂದಿ ಹೋಮ್ ಐಸೋಲೇಷನ್ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು 1596 ಮಂದಿ ಹೋಮ್ ಐಸೋಲೇಷನ್ ಚಿಕಿತ್ಸೆಯಲ್ಲಿದ್ದಾರೆ ಎಂದು ಅವರು ಹೇಳಿದರು.
ಕೋವಿಡ್ಗೆ ಇಂದು ಐವರು ಬಲಿ
ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು ಒಟ್ಟು ಐವರು ಕೋವಿಡ್ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾ ದವರ ಸಂಖ್ಯೆ 60ಕ್ಕೇರಿದೆ. ಇವರಲ್ಲಿ ಉಡುಪಿಯ ನಾಲ್ವರು ಹಾಗೂ ಕುಂದಾಪುರದ ಒಬ್ಬರು ಸೇರಿದ್ದಾರೆ.
ಉಡುಪಿ ತಾಲೂಕಿನ 76, 77, 65 ವರ್ಷ ಪ್ರಾಯದ ಪುರುಷರು ಹಾಗೂ 50 ವರ್ಷ ಪ್ರಾಯದ ಮಹಿಳೆ ಮೃತಪಟ್ಟರೆ, ಕುಂದಾಪುರ ತಾಲೂಕಿನ 56 ವರ್ಷ ಪ್ರಾಯದ ಪುರುಷ ಅಸುನೀಗಿದ್ದಾರೆ. ಇವರಲ್ಲಿ ಹೆಚ್ಚಿನವರೆಲ್ಲರೂ ಮಧುಮೇಹ, ಹೈಪರ್ಟೆನ್ಶನ್, ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಗಳಿಂದ ಬಳಲುತಿದ್ದು, ಕೋವಿಡ್ ಸೋಂಕಿಗೆ ತುತ್ತಾಗಿದ್ದರು ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ.