ಕೊರೋನದಿಂದ ಮೃತಪಟ್ಟ ಮಹಿಳೆ: ಅಂತ್ಯಸಂಸ್ಕಾರಕ್ಕೂ ಬಾರದೆ ಪರಾರಿಯಾದ ಪತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.9: ಕೊರೋನ ಸೋಂಕಿನಿಂದ ಮೃತಪಟ್ಟ ಸ್ವಂತ ಪತ್ನಿಯ ಅಂತ್ಯಸಂಸ್ಕಾರವನ್ನು ಮಾಡದೇ ಸೋಂಕಿನ ಭಯದಿಂದ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಶಂಕರಮಠ ವಾರ್ಡ್ ನ ಜೆ.ಸಿ.ನಗರದಲ್ಲಿ ವಾಸವಿದ್ದರು. ಪತ್ನಿಯು ನಗರದ ಮಾಲ್ ಒಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಪತ್ನಿಗೆ ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯ ಉಂಟಾಯಿತು. ನಂತರ ಮಹಿಳೆಯನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇದೇ ವೇಳೆ ಯುವತಿಯ ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ರಿಪೊರ್ಟ್ ಬರುತ್ತಿದ್ದಂತೆ ಪತಿ ಕೂಡಲೇ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಶನಿವಾರ ಪತ್ನಿ ಕೊನೆಯುಸಿರೆಳೆದಿದ್ದಾಳೆ. ಆದರೆ, ಎಷ್ಟೇ ಕರೆ ಮಾಡಿದರೂ ಪರಾರಿಯಾದ ಗಂಡ ಕರೆ ಸ್ವೀಕರಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಅಂತ್ಯ ಸಂಸ್ಕಾರಕ್ಕೂ ಬರಲಿಲ್ಲ ಎನ್ನಲಾಗಿದ್ದು, ಕೊನೆಗೆ ಮೃತ ಯುವತಿಯ ಅಂತ್ಯ ಸಂಸ್ಕಾರವನ್ನು ಸ್ಥಳೀಯ ಪಾಲಿಕೆ ಸದಸ್ಯ ಎಂ.ಶಿವರಾಜು ನೆರವೇರಿಸಿದ್ದಾರೆ.