ನವಜಾತ ಶಿಶುವನ್ನು ತಬ್ಬಿಹಿಡಿದು ರಕ್ಷಿಸಿದ ರಕ್ತಸಿಕ್ತ ಬಟ್ಟೆಯಲ್ಲಿರುವ ತಂದೆಯ ಫೋಟೊ ವೈರಲ್
ಬೈರೂತ್ ನಲ್ಲಿ ಭಾರೀ ಸ್ಫೋಟಕ್ಕೆ ನಿಮಿಷಗಳ ಮೊದಲು ಜನಿಸಿದ ಮಗು

ಹೊಸದಿಲ್ಲಿ: ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಭಾರೀ ಸ್ಫೋಟ ಸಂಭವಿಸುವುದಕ್ಕೆ ನಿಮಿಷಗಳ ಮೊದಲು ಜನಿಸಿದ ನವಜಾತ ಶಿಶುವನ್ನು ರಕ್ತ ಸಿಕ್ತ ಬಟ್ಟೆ ಧರಿಸಿರುವ ತಂದೆ ಸ್ಫೋಟದಿಂದ ರಕ್ಷಿಸಿ ತಬ್ಬಿ ಹಿಡಿದಿರುವ ಫೋಟೊಗಳು ವೈರಲ್ ಆಗಿವೆ.
ಬೈರೂತ್ ನಲ್ಲಿ ಸಂಭವಿಸಿದ ಈ ಭಾರೀ ಸ್ಫೋಟದಲ್ಲಿ 150 ಜನರು ಮೃತಪಟ್ಟಿದ್ದು, 6,000 ಮಂದಿ ಗಾಯಗೊಂಡಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ.
ಬೈರೂತ್ ನ ಅಲ್ ರೌಮ್ ಆಸ್ಪತ್ರೆಯಲ್ಲಿ ಕ್ರಿಸ್ಟಲ್ ಸವಾಯ ಗಂಡು ಮಗುವಿಗೆ ಜನ್ಮ ನೀಡಿದ ತಕ್ಷಣ ಬೈರೂತ್ ನಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಕೂಡಲೇ ಕ್ರಿಸ್ಟಲ್ ಪತಿ ಜಾದ್ ಮಗುವನ್ನು ಅಪ್ಪಿ ಹಿಡಿದು ರಕ್ಷಿಸಿದರು. ಪುಡಿಯಾದ ಗಾಜುಗಳು ತುಂಬಿದ್ದ ಹಾಸಿಗೆಯ ಮೇಲೆ ಕ್ರಿಸ್ಟಲ್ ಮಲಗಿದ್ದರು.
“ಅದು ಅತ್ಯಂತ ಕಷ್ಟಕರ ಸನ್ನಿವೇಶವಾಗಿತ್ತು. ಸ್ಫೋಟ ಸಂಭವಿಸಿದಾಗ ನಾವು ಕೋಣೆಯಲ್ಲಿದ್ದವು. ಏನಾಯಿತು ಎನ್ನುವುದೇ ನಮಗೆ ಗೊತ್ತಾಗಲಿಲ್ಲ. ಎಲ್ಲವೂ ನೆಲಕ್ಕುರುಳಿತು. ಕೂಡಲೇ ನನ್ನ ಮಗುವನ್ನು ರಕ್ಷಿಸಲು ನಾನು ಅವನನ್ನು ತಬ್ಬಿಹಿಡಿದೆ. ಇನ್ನೊಂದು ಸ್ಫೋಟ ಸಂಭವಿಸಬಹುದು ಎಂದು ಹೆದರಿ ಹೊರಗೋಡಿದೆ” ಎಂದು ಜಾದ್ ಹೇಳುತ್ತಾರೆ.
“ಮಗು ತಾಯಿಯ ಪಕ್ಕದಲ್ಲೇ ಮಲಗಿತ್ತು. ನನಗೆ ತಲೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ. ಪತ್ನಿಯ ತಲೆಗೂ ಗಾಯಗಳಾಗಿವೆ. ದೇವರ ದಯೆಯಿಂದ ಮಗು ಯಾವುದೇ ಅಪಾಯವಿಲ್ಲದೆ ಪಾರಾಗಿದೆ” ಎಂದವರು ಹೇಳಿದ್ದಾರೆ.