ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ: ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡ ಶಿರಸಿಯ ಸನ್ನಿಧಿ

ಭಟ್ಕಳ: ಕೊರೋನ ಲಾಕ್ಡೌನ್ ಸದೂಪಯೋಗಗೊಂಡಿದ್ದು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ ಎಂದು 625/625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿರುವ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಧಿ ಮಹಬಳೇಶ್ವರ ಹೆಗಡೆ ಮಾಧ್ಯಮಗಳ ಮುಂದೆ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಶಿಕ್ಷಕರು ಹಾಗೂ ಕುಟುಂಬದ ಸದಸ್ಯರ ಸಂಪೂರ್ಣ ಸಹಕಾರ ದೊರಕಿತು. ಲಾಕ್ಡೌನ್ ಇದ್ದರೂ ಕೂಡ ಶಿಕ್ಷಕರು ಎಲ್ಲ ವಿಷಯಗಳ ಮಾಹಿತಿ ಯನ್ನು ವಾಟ್ಸಪ್ ಮೂಲಕ ನೀಡುತ್ತಿದ್ದರು. ಲಾಕ್ಡೌನ್ ಆತಂಕ ತಂದಿತು. ಆದರೆ ನನಗೆ ಪಾಠಗಳನ್ನು ಚೆನ್ನಾಗಿ ಅಭ್ಯಾಸ ಮಾಡಲು ಒಂದು ಸುವರ್ಣಾವಕಾಶವನ್ನೂ ನೀಡಿತು ಎಂದು ಸನ್ನಿಧಿ ಹೆಗಡೆ ತಿಳಿಸಿದ್ದಾಳೆ. ಸನ್ನಿಧಿ ಹೆಗಡೆ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿಯನ್ನು ಮತ್ತುಷ್ಟು ಹೆಚ್ಚಿಸಿದ್ದಾಳೆ.
ಶಿರಸಿಯ ಪ್ರಗತಿ ನಗರದ ಮಹಾಬಲೇಶ್ವರ ಹೆಗಡೆ ಹಾಗೂ ವೀಣಾ ಹೆಗಡೆ ದಂಪತಿಯ ಪುತ್ರಿಯಾಗಿರುವ ಸನ್ನಿಧಿ ಅವರ ತಂದೆ ಕಾರವಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.





