ಮ್ಯಾಂಚೆಸ್ಟರ್ ಯುನೈಟೆಡ್ ಸೆಮಿಫೈನಲ್ ಗೆ
ಯುರೋಪಾ ಲೀಗ್
ಕಲೋನ್: ಯುರೋಪಾ ಲೀಗ್ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೂನೋ ಫೆರ್ನಾಂಡಿಸ್ ಹೆಚ್ಚುವರಿ ಸಮಯದಲ್ಲಿ ದಾಖಲಿಸಿದ ಏಕೈಕ ಪೆನಾಲ್ಟಿ ಗೋಲು ನೆರವಿನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸೋಮವಾರ ಕೋಪನ್ ಹ್ಯಾಗನ್ ವಿರುದ್ಧ 1-0 ಗೋಲುಗಳಿಂದ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಪೋರ್ಚುಗೀಸ್ ಮಿಡ್‌ಫೀಲ್ಡರ್ ಬ್ರೂನೋ ಫೆರ್ನಾಂಡಿಸ್ 95ನೇ ನಿಮಿಷದ ಪೆನಾಲ್ಟಿ ಅವಕಾಶದಲ್ಲಿ ಗೋಲು ಕಬಳಿಸಿ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಯುರೋಪಾ ಲೀಗ್ ಸೆಮಿಫೈನಲ್ ತಲುಪಲು ನೆರವಾದರು.
2017ರಲ್ಲಿ ಯುರೋಪಿನ ಎರಡನೇ ಹಂತದ ಸ್ಪರ್ಧೆಯಲ್ಲಿ ಯುನೈಟೆಡ್ ತಂಡ ಜಯ ಗಳಿಸಿತ್ತು. ರವಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಸೆವಿಲ್ಲಾ ಅಥವಾ ವೊಲ್ವರ್‌ಹ್ಯಾಂಪ್ಟನ್ ವಾಂಡರರ್ಸ್ ತಂಡವನ್ನು ಯುನೈಟೆಡ್ ಎದುರಿಸಲಿದೆ.
ಇಂಟರ್ ಮಿಲಾನ್ ಸೋಮವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಬೇಯರ್ ಲಿವರ್‌ಕುಸೆನ್‌ನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿತು. ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ ಪಂದ್ಯದ ಪ್ರಥಮಾರ್ಧದಲ್ಲಿ ಕೋಪನ್ ಹ್ಯಾಗನ್ ಪ್ರಾಬಲ್ಯ ಸಾಧಿಸಿತು ಮತ್ತು ಹಲವು ಅವಕಾಶಗಳನ್ನು ಕಳೆದುಕೊಂಡಿತು. ಆರಂಭಿಕ 20 ನಿಮಿಷಗಳಲ್ಲಿ ಯುನೈಟೆಡ್‌ನ ರಕ್ಷಣಾ ಕೋಟೆಯನ್ನು ಮುರಿಯಲು ವಿಫಲ ಯತ್ನ ನಡೆಸಿತು.
ಕೊನೆಯ 15 ನಿಮಿಷಗಳ ಹೆಚ್ಚುವರಿ ಸಮಯದಲ್ಲಿ ಕೋಪನ್ ಹ್ಯಾಗನ್ ಸಮಬಲ ಸಾಧಿಸುವ ಅವಕಾಶಕ್ಕಾಗಿ ಹೋರಾಟ ನಡೆಸಿತು.