ಗಲಭೆ ವೇಳೆ ನನ್ನನ್ನು ರಕ್ಷಿಸಿದ್ದು ಮುಸ್ಲಿಮರು: ಬಂಧಿತ ನವೀನ್ ತಾಯಿ ಜಯಂತಿ
"ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ ಇದ್ದೇವೆ, ಇದು ರಾಜಕೀಯ ಷಡ್ಯಂತ್ರ"

ಬೆಂಗಳೂರು, ಆ.12: ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ವೇಳೆ ಇದೇ ಪ್ರದೇಶದಲ್ಲಿರುವ ಮುಸ್ಲಿಮ್ ಯುವಕರು ನನ್ನನ್ನು ರಕ್ಷಿಸಿದರು ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿಯೂ ಆಗಿರುವ ಬಂಧಿತ ಆರೋಪಿ ಪಿ.ನವೀನ್ ಅವರ ತಾಯಿ ಆರ್.ಜಯಂತಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ ಬಾಡಿಗೆ ಮನೆಯವರ ವಾಹನಗಳನ್ನು ಧ್ವಂಸ ಮಾಡಿ, ಬೆಂಕಿ ಹಚ್ಚಿದರು. ಈ ಭೀತಿಯಿಂದ ಮನೆಯಲ್ಲಿದ್ದ 12 ಮಂದಿ ಪಕ್ಕದ ಮನೆಗೆ ಜಿಗಿದರು. ಇದೇ ವೇಳೆ ಸ್ಥಳಕ್ಕೆ ಬಂದ ಪರಿಚಿತ ಮುಸ್ಲಿಂ ಹುಡುಗರು, 'ಅಮ್ಮಾ ನೀವು ಇಲ್ಲಿರಬೇಡಿ. ಇಲ್ಲೇ ಇದ್ದರೆ ನಿಮ್ಮ ಜೀವಕ್ಕೆ ಅಪಾಯ. ಮೊದಲು ಇಲ್ಲಿಂದ ಹೊರಡಿ' ಎಂದು ಗಲಭೆ ನಡೆಯುತ್ತಿದ್ದ ಸ್ಥಳದಿಂದ ಪಕ್ಕಕ್ಕೆ ಸಾಗಿಸಿದರು ಎಂದು ತಿಳಿಸಿದರು.
ಮಂಗಳವಾರ ರಾತ್ರಿ ಸರಿಸುಮಾರು 8.30 ವೇಳೆಗೆ ಯುವಕರ ದೊಡ್ಡ ಗುಂಪೊಂದು ಕಾವಲ್ ಭೈರಸಂದ್ರದಲ್ಲೇ ಇರುವ ನಮ್ಮ ಮನೆಯ ಮುಂದೆ ಸಾಗಿತು. ಶಾಸಕರ ಮನೆಗೆ ನಿತ್ಯ ನೂರಾರು ಮಂದಿ ಹೋಗುತ್ತಾರೆ ಎಂದು ಸುಮ್ಮನಾದೆ. ಬಹುತೇಕರು 15ರಿಂದ 20 ವಯೋಮಾನದವರಿದ್ದರು. ಅವರು ಈ ಜಾಗಕ್ಕೆ ಹೊಸಬರಂತೆ ಕಂಡರು. ಏನೆಂದು ಕೇಳುವಷ್ಟರಲ್ಲಿ ಗುಂಪಾಗಿ ಅಕ್ಕಪಕ್ಕದ ಮನೆ ಮೇಲೆ ದಾಳಿ ಮಾಡಿದರು ಎಂದು ಘಟನೆ ಕುರಿತು ವಿವರಿಸಿದರು.
ಮೊದಲಿನಿಂದಲೂ ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯವರು ಅಣ್ಣ ತಮ್ಮಂದಿರಂತೆ ಇದ್ದೇವೆ. ಇದು ರಾಜಕೀಯ ಷಡ್ಯಂತ್ರ. ಪಾಲಿಕೆ ಚುನಾವಣೆ ಸಮೀಪಿಸುತ್ತಿರುವುದರಿಂದ ನನ್ನ ತಮ್ಮನಿಗೆ ಕೆಟ್ಟ ಹೆಸರು ಬರಬೇಕೆಂದು ಉದ್ದೇಶಪೂರ್ವಕವಾಗಿ ರಾಜಕೀಯ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆ. ಗಲಭೆಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.







