ಮಂಗಳೂರಲ್ಲಿ ಪ್ಲಾಸ್ಮಾ ದಾನ ಅನುಮತಿಗೆ ‘ವೆಲ್‌ನೆಸ್ ಹೆಲ್ಪ್‌ಲೈನ್’ ಮನವಿ

ಮಂಗಳೂರು, ಆ.12: ಕೋವಿಡ್‌ನಿಂದ ಗುಣಮುಖರಾದವರು ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರಿದ್ದು, ಪ್ಲಾಸ್ಮಾ ಸಂಗ್ರಹ ಹಾಗೂ ದಾನಕ್ಕೆ ಸರಕಾರದಿಂದ ಅನುಮತಿ ದೊರಕಿಸಿ ಕೊಡಲು ಒತ್ತಾಯಿಸಿ ವೆಲ್‌ನೆಸ್ ಹೆಲ್ಪ್‌ಲೈನ್ ಸಂಸ್ಥೆಯು ಶಾಸಕ ವೇದವ್ಯಾಸ ಕಾಮತ್ ಅವರಲ್ಲಿ ಬುಧವಾರ ಮನವಿ ಸಲ್ಲಿಸಿದೆ.
ಮಂಗಳೂರಿನಲ್ಲಿ ಕೋವಿಡ್‌ನಿಂದ ಗುಣಮುಖರಾದವರಿಂದ ಪ್ಲಾಸ್ಮಾ ಸಂಗ್ರಹಕ್ಕೆ ಅನುಮತಿ ಇಲ್ಲದ ಕಾರಣ ಜಿಲ್ಲೆಯ ಇಬ್ಬರು ಯುವಕರು ಇತ್ತೀಚೆಗೆ ಬೆಂಗಳೂರಿಗೆ ತೆರಳಿ ವೃದ್ಧರೊಬ್ಬರಿಗೆ ಪ್ಲಾಸ್ಮಾ ದಾನ ಮಾಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೂ ಪಾತ್ರವಾಗಿತ್ತು. ಪ್ಲಾಸ್ಮಾ ದಾನ ಮಾಡಲು ಸಂಸ್ಥೆಯಿಂದ ಸಹಕಾರ ನೀಡಲಾಗಿತ್ತು. ಇಲ್ಲೇ ಕೋವಿಡ್ ನಿಂದ ಗುಣಮುಖರಾದವರಿಂದ ಪ್ಲಾಸ್ಮಾ ದಾನಕ್ಕೆ ಅನುಮತಿ ನೀಡಿದರೆ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ವೆಲ್‌ನೆಸ್ ಹೆಲ್ಪ್‌ಲೈನ್ ಸಂಸ್ಥೆಯ ಸಂಚಾಲಕ ಖಾಸಿಮ್ ಅಹ್ಮದ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪ್ಲಾಸ್ಮಾ ಸಂಗ್ರಹದ ಬಗ್ಗೆ ಜಾಗೃತಿ ಇಲ್ಲ. ಒಂದೆಡೆ ಜಾಗೃತಿಯ ಕೊರತೆ ಮತ್ತು ಇನ್ನೊಂದೆಡೆ ಸಂಗ್ರಹಕ್ಕೆ ಅನುಮತಿ ಇಲ್ಲದ ಕಾರಣ ಬೆಂಗಳೂರಿಗೆ ಅಲೆಯುವ ಪರಿಸ್ಥಿತಿ ಇದೆ. ರಾಜ್ಯ ಸರಕಾರವು ಪ್ಲಾಸ್ಮಾ ಸಂಗ್ರಹಕ್ಕೆ ಬೆಂಗಳೂರಿನ ಕೆಲವೇ ಆಸ್ಪತ್ರೆಗಳಿಗೆ ಅನುಮತಿ ನೀಡಿದ ಕಾರಣ ರಾಜ್ಯದ ವಿವಿಧ ಜಿಲ್ಲೆಯ ದಾನಿಗಳು ಮಾತ್ರವಲ್ಲ, ‘ಪ್ಲಾಸ್ಮಾ’ ಅಗತ್ಯವಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಂಗ್ರಹ ಕೇಂದ್ರ ತೆರೆದರೆ ಬಹಳಷ್ಟು ಪ್ರಯೋಜನವಾಗಲಿದೆ ಎಂದರು.
ಸಂಸ್ಥೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ವೇದವ್ಯಾಸ ಕಾಮತ್, ಮಂಗಳೂರಲ್ಲಿ ಪ್ಲಾಸ್ಮಾ ಸಂಗ್ರಹಕ್ಕೆ ಸರಕಾರದದಿಂದ ಅನುಮತಿ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಮನವಿ ಸಲ್ಲಿಸುವ ಸಂದರ್ಭ ವೆಲ್‌ನೆಸ್ ಹೆಲ್ಪ್‌ಲೈನ್‌ನ ಝೀಯಾವುದ್ದೀನ್ ಅಹ್ಮದ್, ಅಬೂಬಕರ್ ಗ್ರೂಪ್ 4 ಉಪಸ್ಥಿತರಿದ್ದರು.







