ಉಡುಪಿ: ಇಂದು 322 ಮಂದಿಯಲ್ಲಿ ಕೊರೋನ ಪಾಸಿಟಿವ್
ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ 76ಕ್ಕೆ ಏರಿಕೆ
ಉಡುಪಿ, ಆ.14: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಪಾಸಿಟಿವ್ ಬಂದವರ ಸಂಖ್ಯೆ 322 ಆಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 7490ಕ್ಕೇರಿದೆ. ಇಂದು2262 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಗಳು ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಶುಕ್ರವಾರ ಕೊರೋನ ಸೋಂಕು ಪತ್ತೆಯಾದ 322 ಮಂದಿಯಲ್ಲಿ ಉಡುಪಿ ತಾಲೂಕಿನ 186 ಮಂದಿ, ಕುಂದಾಪುರ ತಾಲೂಕಿನ 95 ಹಾಗೂ ಕಾರ್ಕಳ ತಾಲೂಕಿನ 36 ಮಂದಿ ಸೇರಿದ್ದಾರೆ. ಉಳಿದ ಐವರು ಹೊರಜಿಲ್ಲೆಯವರಾಗಿದ್ದು, ಜಿಲ್ಲೆಯಲ್ಲಿ ಚಿಕಿತ್ಸೆಗೆ ಬಂದು ಪಾಸಿಟಿವ್ ಆಗಿದ್ದಾರೆ.
ಮಕ್ಕಳು ಸೇರಿದಂತೆ 175 ಮಂದಿ ಪುರುಷರು ಹಾಗೂ 147 ಮಂದಿ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ. ಇವರಲ್ಲಿ 123 ಪುರುಷರು ಹಾಗೂ 111 ಮಹಿಳೆಯರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಇಂದಿನ 322 ಪಾಸಿಟಿವ್ ಪ್ರಕರಣ ಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 7497ಕ್ಕೇರಿದೆ ಎಂದು ಡಾ.ಸೂಡ ತಿಳಿಸಿದರು.
ಇಂದು ಕೊರೋನ ಪಾಸಿಟಿವ್ ದೃಢಗೊಂಡ 322 ಮಂದಿಯಲ್ಲಿ 110 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 88 ಮಂದಿ ಶೀತಜ್ವರ ದಿಂದ ಹಾಗೂ ನಾಲ್ವರು ಉಸಿರಾಟ ತೊಂದರೆಯಿಂದ ಬಳಲುತಿದ್ದು ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಮೂವರು ದೇಶೀಯ ಪ್ರವಾಸ ದಿಂದ ಮರಳಿದ್ದು, ಪಾಸಿಟಿವ್ ಕಾಣಿಸಿಕೊಂಡಿದೆ. 117 ಮಂದಿಯ ಸೋಂಕಿನ ಸಂಪರ್ಕ ಇನ್ನೂ ತನಿಖೆಯಲ್ಲಿದೆ ಎಂದರು.
614 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 614 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿ ದ್ದಾರೆ. ಇವರಲ್ಲಿ 333 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 281 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 4872ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2550 ಮಂದಿ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 1301 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1249 ಮಂದಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್ಓ ಹೇಳಿದರು.
2369 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಶುಕ್ರವಾರ 2369 ಮಂದಿಯ ಗಂಟಲು ದ್ರವದ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 1565 ಮಂದಿ, ಕೋವಿಡ್ ಸಂಪರ್ಕಿತರು 173 ಮಂದಿ ಇದ್ದರೆ, ಉಸಿರಾಟ ತೊಂದರೆಯ 11 ಮಂದಿ, ಶೀತಜ್ವರದಿಂದ ಬಳಲುವ 58 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್ಸ್ಪಾಟ್ಗಳಿಂದ ಆಗಮಿಸಿದ 562 ಮಂದಿಯ ಸ್ಯಾಂಪಲ್ಗಳು ಸೇರಿವೆ ಎಂದು ಡಾ. ಸೂಡ ತಿಳಿಸಿದರು.
ಇಂದು ಪಡೆದ 2369 ಸ್ಯಾಂಪಲ್ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 53,162ಕ್ಕೇರಿದೆ. ಇವುಗಳಲ್ಲಿ ಈವರೆಗೆ 44,025 ನೆಗೆಟಿವ್, 7497 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 75 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 1640 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.
ಜಿಲ್ಲೆಯಲ್ಲಿ ಶುಕ್ರವಾರ 322 ಮಂದಿಯನ್ನು ಆಸ್ಪತ್ರೆಗಳ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಇವರಲ್ಲಿ ಒಟ್ಟು 190 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ 132 ಮಂದಿ ಹೋಮ್ ಐಸೋಲೇಷನ್ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು 2298 ಮಂದಿ ಹೋಮ್ ಐಸೋಲೇಷನ್ ಚಿಕಿತ್ಸೆಯಲ್ಲಿದ್ದಾರೆ ಎಂದು ಅವರು ಹೇಳಿದರು.
ದಿನದಲ್ಲಿ ಕೋವಿಡ್ಗೆ ಆರು ಬಲಿ
ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು ಆರು ಮಂದಿ ಕೋವಿಡ್-19 ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. ನಿನ್ನೆ ಅಪರಾಹ್ನ ಹಿರಿಯಡ್ಕದಿಂದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಕೆಲವೇ ಹೊತ್ತಿನಲ್ಲಿ ಹೃದಯಾಘಾತದಿಂದ ಮೃತಪಟ್ಟ 56 ವರ್ಷ ಪ್ರಾಯದ ಪುರುಷನಲ್ಲಿ ಇಂದು ಕೊರೋನ ಸೋಂಕು ಪತ್ತೆಯಾಗಿದೆ.
ಉಳಿದಂತೆ ಉಡುಪಿಯ 63 ವರ್ಷ ಪ್ರಾಯದ ಪುರುಷ, ಕುಂದಾಪುರದ 86, 48, 48 ಹಾಗೂ 55 ವರ್ಷ ಪ್ರಾಯದ ಪುರುಷರು ಅನ್ಯ ಸಮಸ್ಯೆ ಗಳ ಕಾರಣದಿಂದ ಕೊರೋನ ಪಾಸಿಟಿವ್ನೊಂದಿಗೆ ಮೃತಪಟ್ಟಿದ್ದಾರೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19ಕ್ಕೆ ಇದುವರೆಗೆ ಮೃತಪಟ್ಟವರ ಸಂಖ್ಯೆ 76ಕ್ಕೇರಿದೆ ಎಂದು ತಿಳಿದುಬಂದಿದೆ.
ಬೈಂದೂರಿನಲ್ಲಿ 11 ಮಂದಿಯಲ್ಲಿ ಪಾಸಿಟಿವ್
ಬೈಂದೂರು ತಾಲೂಕಿನಲ್ಲಿ ಇಂದು ಒಟ್ಟು 11 ಮಂದಿಯಲ್ಲಿ ಕೋವಿಡ್-19ಕ್ಕೆ ಪಾಸಿಟಿವ್ ಕಾಣಿಸಿಕೊಂಡಿದೆ. ಇವರನ್ನು ಚಿಕಿತ್ಸೆಗಾಗಿ ದಾಖಲಿಸಿ, ಅವರ ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.
ನಾಡ ಗ್ರಾಮದಲ್ಲಿ 2, ಉಪ್ಪುಂದದಲ್ಲಿ 3, ಹೆರಂಜಾಲು 1 ಹಾಗೂ ಬೈಂದೂರಿನಲ್ಲಿ ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದವರು ತಿಳಿಸಿದರು.