ಬಿಬಿಎಂಪಿ ಗುತ್ತಿಗೆದಾರರು, ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿಸಿ ಹಣ ಲೂಟಿ: ಗೌತಮ್ ಕುಮಾರ್ ಆರೋಪ
ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಮೇಯರ್ ಪತ್ರ
ಬೆಂಗಳೂರು, ಆ.1: ಬಿಬಿಎಂಪಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶಾಮೀಲಾಗಿ ಕಾಮಗಾರಿಗಳು ನಡೆಯದೆ ಇದ್ದರೂ ಸಹ ಕಾಮಗಾರಿಗಳ ಹೆಸರಲ್ಲಿ ಹಣ ಲಪಟಾಯಿಸಿದ್ದಾರೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ರಸ್ತೆ, ಮೂಲಭೂತ ಸೌಕರ್ಯ ವಿಭಾಗ ಹಾಗೂ ಬೃಹತ್ ನೀರು ಕಾಲುವೆ ವಿಭಾಗದಲ್ಲಿ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಕೈಗೊಳ್ಳವಂತೆ ತಿಳಿಸಲಾಗಿದೆ ಎಂದರು.
ಎಸಿಆರ್ ಅಭಿಜಿತ್, ರಾಮಲಿಂಗಂ, ಯೋಗೇಶ್, ಕೆ.ಜೆ.ವಿಶ್ವನಾಥ್ ಮತ್ತಿತರ ಗುತ್ತಿಗೆದಾರರ ಹೆಸರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಕೆಲವು ಅಧಿಕಾರಿಗಳು, ಗುತ್ತಿಗೆದಾರರ ಜತೆ ಕೈ ಜೋಡಿಸಿ ಕೆಲವು ಬೋಗಸ್ ಬಿಲ್ಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಬಿಬಿಎಂಪಿ ಮುಖ್ಯಎಂಜಿನಿಯರ್ ಪ್ರಹ್ಲಾದ್ ಅವರೇ ದೊಡ್ಡ ಕಿಂಗ್ಪಿನ್ ಆಗಿದ್ದಾರೆ. ಹಿರಿಯ ಅಧಿಕಾರಿಗಳು ಕೂಡ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು.
ಕಾಮಗಾರಿಯ ಗುತ್ತಿಗೆ ನೀಡುವಾಗ ತಾಂತ್ರಿಕ ಮೌಲ್ಯಮಾಪನವನ್ನು ಅಧಿಕಾರಿಗಳು ಸರಿಯಾಗಿ ನೀಡಿಲ್ಲ. ಈ ಅಕ್ರಮಕ್ಕೆ ಸಹಕರಿಸಿದ ಕಾರ್ಯಪಾಲಕ ಎಂಜಿನಿಯರ್ಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
ಕೆಲವು ಅಕ್ರಮಗಳ ಬಗ್ಗೆ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಗಮನಕ್ಕೆ ತಂದು ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೂ ಅವರು ಯಾವುದೇ ಕ್ರಮಕೈಗೊಂಡಿಲ್ಲ. ರಾಜಕಾಲುವೆ ವಿಭಾಗದ ಕಾಮಗಾರಿಗಳ ಗುತ್ತಿಗೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಆ ವಿಭಾಗದ ಮುಖ್ಯ ಎಂಜಿನಿಯರ್ ಗಮನಕ್ಕೆ ತಂದು ವರದಿ ನೀಡುವಂತೆ ಸೂಚಿಸಲಾಗಿತ್ತು. ಅವರಿಂದಲೂ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಎರಡೂ ವಿಭಾಗಗಳ ಮುಖ್ಯ ಎಂಜಿನಿಯರ್ಗಳು ಗುತ್ತಿಗೆದಾರರ ಜತೆ ಶಾಮೀಲಾಗಿರುವುದು ಕಂಡುಬಂದಿದೆ ಎಂದರು.
ಗುತ್ತಿಗೆ ರದ್ದು ಮಾಡಲು ಒತ್ತಾಯ
ಟೆಂಡರ್ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಕಾಮಗಾರಿ ಗುತ್ತಿಗೆ ಪಡೆಯುವ ಬಗ್ಗೆ ಈ ಹಿಂದೆ ನಡೆದ ಕೌನ್ಸಿಲ್ ಸಭೆಯಲ್ಲೂ ಕೂಡ ಚರ್ಚೆಯಾಗಿತ್ತು. ಹಲವು ಪಾಲಿಕೆ ಸದಸ್ಯರು ಈ ಬಗ್ಗೆ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೂಡ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇವೆ. ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆದಿರುವ ಗುತ್ತಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು ಎಂದು ಮೇಯರ್ ಒತ್ತಾಯಿಸಿದರು.
ನಕಲಿ ದಾಖಲೆ ಸೃಷ್ಟಿ
ಆರ್.ಆರ್ ನಗರ, ಮಹದೇವಪುರ, ಬೇಗೂರು ರಸ್ತೆ ವಿಸ್ತರಣೆ ಕಾಮಗಾರಿ, ಯಲಹಂಕ ವಲಯದ ಮುಖ್ಯರಸ್ತೆ, ಉಪಮುಖ್ಯರಸ್ತೆಗಳ ಪಕ್ಕದ ಪಾದಚಾರಿ ಮಾರ್ಗ ಮತ್ತು ಚರಂಡಿ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿ, ರಾಜಕಾಲುವೆ ಶಾಖೆಯಲ್ಲಿನ ನವ ನಗರೋತ್ಥಾನ ಯೋಜನೆ ಕಾಮಗಾರಿ, ವಿವಿಧ ಕಾಮಗಾರಿಗಳಲ್ಲಿ ಎ.ಅಭಿಜಿತ್, ಕೆ.ಜೆ.ವಿಶ್ವನಾಥ್, ಎ.ಚನ್ನಾರೆಡ್ಡಿ, ಯೋಗೀಶ್ ಮುಂತಾದ ಗುತ್ತಿಗೆದಾರರು ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ಗುತ್ತಿಗೆ ಪಡೆದಿದ್ದಾರೆ ಎಂದು ಮೇಯರ್ ಆರೋಪಿಸಿದರು.