ಕೋವಿಡ್19: ದೇಶದಲ್ಲಿ 50 ಸಾವಿರ ದಾಟಿದ ಸಾವಿನ ಸಂಖ್ಯೆ

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ರೋಗದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 50 ಸಾವಿರದ ಗಡಿ ದಾಟಿದೆ.
ಅಮೆರಿಕ, ಬ್ರೆಝಿಲ್ ಹಾಗೂ ಮೆಕ್ಸಿಕೋ ಜತೆ 50 ಸಾವಿರಕ್ಕೂ ಅಧಿಕ ಮಂದಿ ಸೋಂಕಿನಿಂದ ಮೃತಪಟ್ಟ ನಾಲ್ಕನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.
ಆದರೆ ಭಾರತದಲ್ಲಿ ಸೋಂಕಿತರು ಮೃತಪಟ್ಟ ಪ್ರಮಾಣ (1.9%), ಜಾಗತಿಕ ಸರಾಸರಿ (3.5%)ಗಿಂತ ಕಡಿಮೆ. ಅಂದರೆ ವಿಶ್ವದಲ್ಲಿ ಅಧಿಕ ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ದೇಶಗಳಿಗಿಂತ ಭಾರತ ಕೊರೋನ ಸಾವನ್ನು ನಿಯಂತ್ರಿಸಿದೆ.
ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಹಾಗೂ ಬ್ರೆಝಿಲ್ ದೇಶವನ್ನು ಹೊರತುಪಡಿಸಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೆ ಮೊದಲ ಎರಡು ಸ್ಥಾನಗಳಲ್ಲಿರುವ ದೇಶಗಳಲ್ಲಿ ಭಾರತಕ್ಕಿಂತ ಅಧಿಕ ಸಂಖ್ಯೆಯ ಸೋಂಕಿತರು ಮೃತಪಟ್ಟಿದ್ದಾರೆ. ಭಾರತದಲ್ಲಿ ಇದುವರೆಗೆ 25,87,872 ಪ್ರಕರಣಗಳು ವರದಿಯಾಗಿದ್ದು, 50,079 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 1,71,999 ಮಂದಿ ಮೃತಪಟ್ಟಿದ್ದು, 54 ಲಕ್ಷ ಮಂದಿಗೆ ಸೋಂಕು ತಗುಲಿದೆ. ಅಮೆರಿಕದಲ್ಲಿ ಸೋಂಕಿತರ ಸಾವಿನ ದರ ಶೇಕಡ 3.1ರಷ್ಟಿದೆ. ಬ್ರೆಝಿಲ್‌ನಲ್ಲಿ 32 ಲಕ್ಷ ಮಂದಿ ಸೋಂಕಿತರಿದ್ದು, 1,06,608 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಾವಿನ ದರ ಶೇಕಡ 3.2ರಷ್ಟಾಗಿದೆ.
ಮೆಕ್ಸಿಕೋದಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಇಲ್ಲಿ ಸೋಂಕಿತರ ಸಾವಿನ ದರ ಶೇಕಡ 11ರಷ್ಟಿದೆ. ಇದುವರೆಗೆ 5,11,000 ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಸಾವಿನ ಸಂಖ್ಯೆ 55,908. ಭಾರತದಲ್ಲಿ ಮೊದಲ ಕೋವಿಡ್-19 ಸಾವು ಮಾರ್ಚ್ 12ರಲ್ಲಿ ಸಂಭವಿಸಿದ ಬಳಿಕ 156 ದಿನಗಳಲ್ಲಿ ಸಾವಿನ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಅಮೆರಿಕದಲ್ಲಿ 23 ದಿನಗಳಲ್ಲಿ ಹಾಗೂ ಬ್ರೆಝಿಲ್‌ನಲ್ಲಿ 95 ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.





