ಯುವತಿಯರ ಕಾನೂನುಬದ್ಧ ವಿವಾಹಯೋಗ್ಯ ವಯಸ್ಸು ಹೆಚ್ಚಳ ?

ಹೊಸದಿಲ್ಲಿ : ದೇಶದಲ್ಲಿ ಬಾಲಕಿಯರ ಕಾನೂನುಬದ್ಧ ವಿವಾಹಯೋಗ್ಯ ವಯಸ್ಸನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಪ್ರಸ್ತುತ ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಯುವತಿಯರು ಹಾಗೂ 21 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಕಾನೂನು ಬದ್ಧವಾಗಿ ವಿವಾಹವಾಗಬಹುದಾಗಿದೆ. ಬಾಲಕಿಯರ ವಿವಾಹಯೋಗ್ಯ ವಯಸ್ಸನ್ನು ಪರಿಷ್ಕರಿಸುವ ಸಂಬಂಧ ರಚಿಸಲಾದ ಸಮಿತಿ ವರದಿ ನೀಡಿದ ತಕ್ಷಣ ಮಹಿಳೆಯರ ವಿವಾಹಯೋಗ್ಯ ವಯಸ್ಸು ಏನಾಗಿರಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂಧು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಕೊನೆಗೊಳಿಸುವ ಸಲುವಾಗಿ ವಿವಾಹದ ವಯಸ್ಸು ಎಷ್ಟಿರಬೇಕು ಎಂಬುದನ್ನು ಅಂದಾಜಿಸಬೇಕಿದೆ. ಇದಕ್ಕಾಗಿ ಸಮಿತಿ ರಚಿಸಲಾಗಿದೆ ಎಂದು ಮೋದಿ ವಿವರಿಸಿದ್ದಾರೆ. ಕಿರಿಯ ವಯಸ್ಸಿನ ತಾಯಂದಿರಲ್ಲಿ ಮತ್ತು 16-18 ವಯಸ್ಸಿನಲ್ಲಿ ವಿವಾಹವಾದವರಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ಸಾಮಾನ್ಯ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಜಯಾ ಜೇಟ್ಲೆಯವರ ನೇತೃತ್ವದಲ್ಲಿ ಕಾರ್ಯಪಡೆಯನ್ನು ಕಳೆದ ಜೂನ್‌ನಲ್ಲಿ ರಚಿಸಲಾಗಿತ್ತು. 1929ರ ಶಾರದಾ ಕಾಯ್ದೆಗೆ ತಿದ್ದುಪಡಿ ತಂದು 1978ರಲ್ಲಿ ಮಹಿಳೆಯರ ವಿವಾಹ ವಯಸ್ಸನ್ನು 15ರಿಂದ 18ಕ್ಕೆ ಹೆಚ್ಚಿಸಲಾಗಿತ್ತು. ಭಾರತ ಪ್ರಗತಿ ಸಾಧಿಸಿದಂತೆ ಮಹಿಳೆಯರಿಗೆ ಉನ್ನತ ಶಿಕ್ಷಣ ಕೈಗೊಳ್ಳಲು ಮತ್ತು ಉದ್ಯೋಗಾವಕಾಶ ಹೆಚ್ಚಿದೆ. ಇದರಿಂದಾಗಿ ಮಹಿಳೆಯರ ಹೆರಿಗೆ ಅವಧಿಯ ಸಾವಿನ ಪ್ರಮಾಣ ಕಡಿಮೆಯಾಗಿದ್ದು, ಪೌಷ್ಟಿಕತೆ ಮಟ್ಟ ಹೆಚ್ಚಿದೆ. ಇಡೀ ಸಮಸ್ಯೆಯನ್ನು ಮಹಿಳೆಯರು ಮಾತೃತ್ವ ಪ್ರವೇಶಿಸುವ ಹಂತದ ವಯಸ್ಸಿನ ಹಿನ್ನೆಲೆಯಲ್ಲಿ ನೋಡಬೇಕು ಎಂದು 2020-21ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.







